ಗಂಗಾವತಿ : ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಅಧಿಕಾರಿಯ ತಾರತಮ್ಯ ನೀತಿಯಿಂದಾಗಿ ತನ್ನ ಬೆಂಬಲಿಗ ಸದಸ್ಯರೊಬ್ಬರು ಒಂದು ಮತದಿಂದ ಸೋತಿದ್ದಾರೆ. ಹೀಗಾಗಿ ಅಧಿಕಾರಿಯ ನಡೆ ಪ್ರಶ್ನಿಸಿ ಕೋರ್ಟ್ಗೆ ಹೋಗಲಾಗುವುದು ಎಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದ್ದಾರೆ.
ಕಾರಟಗಿ ತಾಲೂಕಿನ ಹುಳ್ಕಿಹಾಳ ಪಂಚಾಯಿತಿಯ ಎಸ್ಟಿ ಮಹಿಳಾ ಮೀಸಲಾತಿ ಕ್ಷೇತ್ರದಲ್ಲಿ ತನ್ನ ಆಪ್ತ ಸಹಾಯಕ ಮಂಜುನಾಥ ಅವರ ಪತ್ನಿ ಎಂಎಸ್ಸಿ ಪದವೀಧರೆ ವಿಶಾಲಾಕ್ಷಿ, ಎದುರಾಳಿ ವಿರುದ್ಧ ಕೇವಲ ಒಂದು ಮತದಿಂದ ಪರಾಭವಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು ಪ್ರತಿಕ್ರಿಯಿಸಿದರು.
ಒಂದು ಮತದಿಂದ ಗೆದ್ದಿರುವ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದ ತಮ್ಮ ಬೆಂಬಲಿಗರು ಮರುಎಣಿಕೆಗೆ ಒತ್ತಾಯಿಸಿದ್ದಾರೆ. ಮರು ಎಣಿಕೆಗೆ ಅವಕಾಶವಿದೆ. ಆದರೆ ಅಧಿಕಾರಿ ಉದ್ದೇಶ ಪೂರ್ವಕವಾಗಿ ಮರು ಎಣಿಕೆಗೆ ನಿರಾಕರಿಸಿದ್ದಾರೆ. ಬೇಕಿದ್ದರೆ ಕೋರ್ಟ್ಗೆ ಹೋಗಿ ಎಂದಿದ್ದಾರೆ ಎಂದರು.
ಓದಿ: ಶಾಲೆ ಪುನಾರಂಭ; ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಚಿವರ ಸಂವಾದ
ಫಲಿತಾಂಶದ ಪ್ರಕ್ರಿಯೆ ಎಲ್ಲಾ ಮುಗಿದ ಬಳಿಕ ತಿಳಿದು ಬಂದ ಮಾಹಿತಿಯ ಪ್ರಕಾರ, ಚುನಾವಣೆ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಅಧಿಕಾರಿ ಹಾಗೂ ಗೆದ್ದಿರುವ ಅಭ್ಯರ್ಥಿ ರೇಣುಕಾ ಯಮುನಪ್ಪ ಪರಸ್ಪರ ಸಂಬಂಧಿಗಳಾಗಿದ್ದಾರೆ. ಫಲಿತಾಂಶದ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದರು.