ಕೊಪ್ಪಳ: ಎಲ್ಲೆಡೆ ಈಗಾಗಲೇ ಬಿರು ಬೇಸಿಗೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿದೆ.
ಸುಮಾರು 2 ಸಾವಿರ ಜನಸಂಖ್ಯೆ ಇರುವ ಕಲಾಲಬಂಡಿ ಗ್ರಾಮದಲ್ಲಿ ಕೇವಲ ಎರಡೇ ಎರಡು ನಲ್ಲಿಗಳಿವೆ. ದಿನಕ್ಕೆ ಒಂದು ಗಂಟೆ ಮಾತ್ರ ನೀರು ಬರುತ್ತಿದೆ. ಈ ಎರಡು ನಲ್ಲಿಗಳಿಂದಲೇ ಇಡೀ ಊರ ಜನರು ದಾಹ ನೀಗಿಸಿಕೊಳ್ಳಬೇಕಾದ ದಯನೀಯ ಪರಿಸ್ಥಿತಿ ಉಂಟಾಗಿದೆ.
ಕೇವಲ ಒಂದು ಗಂಟೆ ಕಾಲ ಬರುವ ನೀರು ಕೆಲವರಿಗೆ ಸಿಕ್ಕರೆ, ಇನ್ನುಳಿದವರು ಖಾಲಿ ಕೊಡಗಳೊಂದಿಗೆ ಹಿಂದಿರುಗಬೇಕಿದೆ. ಅಲ್ಲದೆ ನೀರಿಗಾಗಿ ಇಲ್ಲಿ ಜನರು ಜಗಳಕ್ಕಿಳಿಯುತ್ತಿದ್ದಾರೆ. ಇಲ್ಲಿನ ಸಮಸ್ಯೆ ಇಷ್ಟು ಗಂಭೀರವಾಗಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಕುಡಿಯುವ ನೀರಿನ ಬವಣೆಯನ್ನು ನೀಗಿಸುವಂತೆ ಆಗ್ರಹಿಸಿದ್ದಾರೆ.