ಗಂಗಾವತಿ: ಅಸಂಖ್ಯಾತ ಭಕ್ತರನ್ನು ಹೊಂದಿರುವ ಪ್ರಮುಖ ಧಾಮ ಹಾಗೂ ಹನುಮನ ಜನ್ಮ ಸ್ಥಳ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿರುವ ಅಂಜನಾದ್ರಿಯ ವಿವಾದ ಮುಗಿದ ಅಧ್ಯಾಯ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಸ್ಪಷ್ಟಪಡಿಸಿದ್ದಾರೆ.
ನಗರಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶದ ಟಿಟಿಡಿ ಹುಟ್ಟುಹಾಕಿದ್ದ ಅಂಜನಾದ್ರಿ ವಿವಾದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಅಲ್ಲದೇ ಅದು ಅಗತ್ಯವೂ ಇರಲಿಲ್ಲ. ಹನುಮ ಹುಟ್ಟಿದ್ದು ಹಂಪೆಯ ಕಿಷ್ಕಿಂಧೆಯಲ್ಲಿ ಎಂಬುವುದು ಸತ್ಯ. ಹೀಗಾಗಿ ಮತ್ತೆ ಅದನ್ನು ಮುನ್ನೆಲ್ಲೆಗೆ ತರುವ ಅಗತ್ಯವಿಲ್ಲ ಎಂದರು.
ಅಲ್ಲದೇ ಅಂಜನಾದ್ರಿ ಸುತ್ತಲೂ ಇರುವ ಪಾಶ್ಚಿಮಾತ್ಯ ಸಂಸ್ಕೃತಿ ರೆಸಾರ್ಟ್ಗಳ ತೆರವಾಗಬೇಕು. ಧಾರ್ಮಿಕ ಪಾವಿತ್ರ್ಯತೆ ಮತ್ತು ಶ್ರದ್ಧೆಯ ಕೇಂದ್ರವಾಗಿರುವ ಅಂಜನಾದ್ರಿಯ ಪರಿಸರದ ಉಳಿವಿಗೆ ಈ ಭಾಗದ ಚುನಾಯಿತರು ಯತ್ನಿಸಬೇಕು ಎಂದು ಕರೆ ನೀಡಿದರು.
ಅಲ್ಲದೇ ದೇಶ ಕೊರೊನಾ ಲಸಿಕೆ ನೀಡುವಲ್ಲಿ ನೂರು ಕೋಟಿ ಜನರನ್ನು ತಲುಪಿರುವುದು ಐತಿಹಾಸಿಕ ಸಾಧನೆ ಎಂದು ಇದೇ ಸಂದರ್ಭದಲ್ಲಿ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.