ಗಂಗಾವತಿ : ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಪರ್ಧೆಯಿಂದ ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಗಂಗಾವತಿಯ ಅಖಾಡದಲ್ಲಿ ದಿನದಿಂದ ದಿನಕ್ಕೆ ರಾಜಕೀಯದ ಕಾವು ಏರತೊಡಗಿದೆ. ಇದುವರೆಗೂ ನಾಯಕರ ನಡುವೆ ಆರೋಪ ಪ್ರತ್ಯಾರೋಪಕ್ಕೆ ಸೀಮಿತವಾಗಿದ್ದ ಗಂಗಾವತಿಯ ಅಖಾಡ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ನೀತಿ ಸಂಹಿತೆ ಉಲ್ಲಂಘಿಸಿ ಚಿತ್ರಗಳನ್ನು, ಗೋಡೆ ಬರಹಗಳನ್ನು ಸಾರ್ವಜನಿಕ ಸ್ಥಳದಲ್ಲಿ ರಾಜಕೀಯ ಪಕ್ಷಗಳು ಬರೆಯುತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಗಮನ ಹರಿಸಿ ತೆರವು ಮಾಡುತ್ತಿಲ್ಲ ಎಂದು ಕೆಆರ್ಪಿಪಿ ಮತ್ತು ಕಾಂಗ್ರೆಸ್ ಪರಸ್ಪರ ಆರೋಪ ಮಾಡಿದೆ.
ಗಂಗಾವತಿ ನಗರದ ಒಂದನೇ ವಾರ್ಡ್ ಪಂಪಾನಗರದ ಹಲವು ಕಡೆಗಳಲ್ಲಿ ಬಿಜೆಪಿ ಗೋಡೆ ಬರಹ ಬರೆದಿದ್ದು, ಈ ಬಗ್ಗೆ ಗಮನ ಹರಿಸಿ ತೆರವು ಮಾಡಬೇಕಿದ್ದ ಚುನಾವಣಾ ಅಧಿಕಾರಿಗಳು ಉದ್ದೇಶ ಪೂರ್ವಕ ಅಲಕ್ಷ್ಯ ವಹಿಸಿದ್ದಾರೆ ಎಂದು ಕೆಆರ್ಪಿಪಿ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ಮನೋಹರಗೌಡ ಆರೋಪಿಸಿದ್ದಾರೆ.
ಬಿಜೆಪಿ ಅಧಿಕಾರದಲ್ಲಿರುವ ಪಕ್ಷ. ಬಿಜೆಪಿಯ ಚುನಾಯಿತ ಪ್ರತಿನಿಧಿಗಳ ಮಾತಿಗೆ ಅಧಿಕಾರಿಗಳು ಮಣೆ ಹಾಕುತ್ತಿದ್ದಾರೆ. ಹೀಗಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದ್ದು, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯುವುದು ಅನುಮಾನ ಮೂಡಿಸಿದೆ ಎಂದು ಮನೋಹರಗೌಡ ಹೇಳಿದ್ದಾರೆ. ನೀತಿ ಸಂಹಿತೆ ಪ್ರಕಾರ ಮನೆ ಮೇಲೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪರವಾನಿಗೆ ಇಲ್ಲದೆ ಯಾವುದೇ ಪಕ್ಷದ ಚಿಹ್ನೆಯನ್ನು ಹಾಕಬಾರದು ಅಥವಾ ಬರೆಯಬಾರದು. ಆದರೆ ಗಂಗಾವತಿಯ ಬಹುತೇಕ ಕಡೆಗಳಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಇರುವ ಗೋಡೆ ಬರಹ ಕಂಡುಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಕೂಡಲೇ ಸಂಬಂಧಿತ ಬಿಜೆಪಿ ಅಭ್ಯರ್ಥಿ ಸೇರಿದಂತೆ ಇತರ ಮೇಲೆ ದೂರು ದಾಖಲಿಸಬೇಕು. ಎಲ್ಲಾ ಗೋಡೆ ಬರಹಗಳನ್ನ ಅಳಿಸಬೇಕು. ಈ ಕುರಿತು ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದು ಮನೋಹರ ಗೌಡ ತಿಳಿಸಿದರು.
ಕೆಆರ್ಪಿಪಿ ವಿರುದ್ಧ ಕಾಂಗ್ರೆಸ್ ಆರೋಪ : ಗಂಗಾವತಿ ನಗರ ವಿವಿಧ ವಾರ್ಡ್ಗಳಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ ಅಳವಡಿಸಿ ಮತದಾರರ ಮೇಲೆ ಪರಿಣಾಮ ಬೀರಲು ಯತ್ನಿಸುತ್ತಿದೆ ಎಂದು ಜನಾರ್ದನ ರೆಡ್ಡಿ ಮತ್ತವರ ಬೆಂಬಲಿಗರ ವಿರುದ್ಧ ಕಾಂಗ್ರೆಸ್ ಆರೋಪ ಮಾಡಿದೆ.
ಈ ಬಗ್ಗೆ ನಗರ ಘಟಕದ ಅಧ್ಯಕ್ಷ ಶಾಮೀದ ಮನಿಯಾರ ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದು, ನಗರದ ವಿವಿಧ ವಾರ್ಡ್ಗಳಲ್ಲಿ ಫುಟ್ಬಾಲ್ ಚಿಹ್ನೆಯನ್ನು ಅಳವಡಿಸುವ ಮೂಲಕ ಕೆಆರ್ಪಿಪಿ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ. ಈ ಬಗ್ಗೆ ಮಾಹಿತಿ ಇದ್ದರೂ ಕೂಡ ಅಧಿಕಾರಿಗಳು ತೆರವಿಗೆ ಮುಂದಾಗಿಲ್ಲ. ಹೀಗಾಗಿ ಗಂಗಾವತಿಯಲ್ಲಿ ನೀತಿ ಸಂಹಿತೆ ವ್ಯಾಪಕ ಪ್ರಮಾಣದಲ್ಲಿ ಉಲ್ಲಂಘನೆಯಾಗುತ್ತಿದೆ ಎಂದು ಮನಿಯಾರ ಆರೋಪಿಸಿದ್ದಾರೆ.
ಕೆಆರ್ಪಿಪಿ ರಾಜ್ಯಾಧ್ಯಕ್ಷನ ಬಂಧಿಸುವಂತೆ ಕಾಂಗ್ರೆಸ್ ಒತ್ತಾಯ : ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯ ಘಟಕದ ಯುವ ಘಟಕದ ಅಧ್ಯಕ್ಷ ಭೀಮಾಶಂಕರ್ ಪಾಟೀಲ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದೆ. ಈ ಬಗ್ಗೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿ ನಿಯೋಜನೆಗೊಂಡಿರುವ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಳಶೆಟ್ಟಿ ಅವರಿಗೆ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶಾಮೀದ ಮನಿಯಾರ ಲಿಖಿತ ದೂರು ನೀಡಿದ್ದಾರೆ.
ಹಾಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಅವರ ವಿರುದ್ಧ ಅವಹೇಳನಕಾರಿ ಪತ್ರಗಳನ್ನು ಹೊರಡಿಸುವ ಮೂಲಕ ಭೀಮಾಶಂಕರ್ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕೂಡಲೇ ಭೀಮಾಶಂಕರ್ ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ತಮ್ಮೇಶ್ ಗೌಡ ಗೆಲ್ಲದಿದ್ದರೆ ನನ್ನ ಮರ್ಯಾದೆ ಉಳಿಯಲ್ಲ, ತಲೆ ಎತ್ತಿ ಓಡಾಡೋಕ್ಕಾಗಲ್ಲ: ಬಿಎಸ್ವೈ