ಕೊಪ್ಪಳ : ಅವೈಜ್ಞಾನಿಕ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಸಾವಿಸ ಸಂಖ್ಯೆ ದಿನೇದಿನೆ ಹೆಚ್ಚಳವಾಗುತ್ತಿವೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶವವಿಟ್ಟು ಪ್ರತಿಭಟನೆ ಮಾಡಿದ್ದಾರೆ.
ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 63ರ ಬೈಪಾಸ್ ರಸ್ತೆ ಇದೀಗ ಸಾವಿನ ರಸ್ತೆಯಾಗಿದೆ. ಅದರಲ್ಲೂ ಕೊಪ್ಪಳದಿಂದ ಚುಕ್ಕನಕಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹೆದ್ದಾರಿಯನ್ನು ದಾಟಿಕೊಂಡು ಹೋಗಬೇಕು. ಅವೈಜ್ಞಾನಿಕ ರಸ್ತೆ ತಿರುವಿನಿಂದಾಗಿ ಕಳೆದೆರಡು ತಿಂಗಳಲ್ಲಿ ಸುಮಾರು 8 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಹೈವೇ ಆಗಿರುವುದರಿಂದ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಜೊತೆಗೆ ವಾಹನಗಳು ಸಹ ಅತಿವೇಗದಲ್ಲಿರುತ್ತವೆ. ಆದರೆ, ಯಾವುದೇ ಫಲಕಗಳು ಹೆದ್ದಾರಿಯಲ್ಲಿಲ್ಲ. ಅಪಘಾತಗಳಾಗುತ್ತಿರುವ ಈ ತಿರುವಿನಲ್ಲಿ ಮುದ್ದಾಬಳ್ಳಿ, ಹ್ಯಾಟಿ, ಮುಂಡರಗಿ, ಮೆಳ್ಳಿಕೇರಿ ಸೇರಿದಂತೆ ನಾಲ್ಕೈದು ಗ್ರಾಮಗಳ ಜನರು ದಿನಂಪ್ರತಿ ವಿವಿಧ ಕೆಲಗಳಿಗೆ ಈ ರಸ್ತೆ ದಾಟಿಕೊಂಡು ಕೊಪ್ಪಳಕ್ಕೆ ಬಂದು ಹೋಗುತ್ತಾರೆ.
ಈ ಹೆದ್ದಾರಿ ದಾಟುವ ವೇಳೆ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ. ಈ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಈ ಕೂಡಲೇ ಸರ್ಕಾರ ಎಚ್ಚೆತ್ತು ಜನರ ಜೀವಹಾನಿಯನ್ನು ತಡೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹೆದ್ದಾರಿ ಕಾಮಗಾರಿ ಆರಂಭದ ಸಂದರ್ಭದಲ್ಲಿ ಆ ಭಾಗದ ಗ್ರಾಮಸ್ಥರು ಅವೈಜ್ಞಾನಿಕ ಕಾಮಗಾರಿಗೆ ವಿರೋಧಿಸಿದ್ದರು. ಇಲ್ಲಿ ಕೆಳ ಅಥವಾ ಮೇಲ್ಸೆತುವೆ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ಆದರೆ, ಅಧಿಕಾರಿಗಳು ಮಾತ್ರ ಗ್ರಾಮಸ್ಥರ ಬೇಡಿಕೆಗೆ ಕ್ಯಾರೆ ಎಂದಿರಲ್ಲಿಲ್ಲ. ಅದರ ಫಲವಾಗಿ ಇದೀಗ 8 ಜನ ಅಮಾಯಕ ವಾಹನ ಸವಾರರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.