ಗಂಗಾವತಿ: ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಮ್ಮ ಗ್ರಾಮದಲ್ಲಿ ಸಾರಿಗೆ ವಾಹನಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ ಕಾರಟಗಿ ತಾಲೂಕಿನ ಮಲರಾನಹಳ್ಳಿಯ ಸಾರ್ವಜನಿಕರು ಹಾಗೂ ಯುವಕರು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ರಾಜ್ಯ ಹೆದ್ದಾರಿ ಗಂಗಾವತಿ-ಕಾರಟಗಿ ಮಧ್ಯೆ ತಮ್ಮ ಗ್ರಾಮ ಬರುತ್ತಿದ್ದು, ಈ ಗ್ರಾಮಕ್ಕೆ ಸುತ್ತಲಿನ ಹತ್ತಾರು ಹಳ್ಳಿ ಸಂಪರ್ಕ ಹೊಂದಿವೆ. ಆಸ್ಪತ್ರೆ, ಕೋರ್ಟ್ ಕಚೇರಿಗೆ ಹೋಗಬೇಕಾದರೆ ನಮ್ಮ ಗ್ರಾಮದ ಮೂಲಕ ಹತ್ತಾರು ಹಳ್ಳಿ ಜನ ಹೋಗಬೇಕು. ಆದರೆ, ಈ ಬಗ್ಗೆ ಕಳೆದ ಹಲವು ಸಲ ಸಾರಿಗೆ ಸಂಸ್ಥೆಯ ವಾಹನಗಳನ್ನು ನಿಲ್ಲಿಸುವಂತೆ ಮನವಿ ಮಾಡಿದರೂ ಇಲಾಖೆಯ ಅಧಿಕಾರಿಗಳು ಗಮನ ಹರಿಸಿಲ್ಲ. ಹೀಗಾಗಿ ನಿತ್ಯ ಗ್ರಾಮದ ಯುವಕರು ಹಾಗೂ ಸಾರಿಗೆ ಇಲಾಖೆಯ ಸಿಬ್ಬಂದಿ ಮಧ್ಯೆ ವಾಗ್ವಾದಕ್ಕೆ ಕಾರಣವಾಗುತ್ತಿದೆ ಎಂದು ಗ್ರಾಮಸ್ಥರು ವಿವರಿಸಿದರು.
ಗುಲ್ಬರ್ಗ ವಿಭಾಗಕ್ಕೆ ಒಳಪಡುವ ಎಲ್ಲ ಈಶಾನ್ಯ ಸಾರಿಗೆ ವಾಹನಗಳನ್ನು ತಮ್ಮ ಗ್ರಾಮದಲ್ಲೂ ನಿಲ್ಲಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಸುಮಾರು 2 ಗಂಟೆಗೂ ಹೆಚ್ಚು ಕಾಲ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರ ಮಧ್ಯಸ್ಥಿಕೆಯ ಭರವಸೆ ನೀಡಿದ ಬಳಿಕ ಯುವಕರು ಧರಣಿ ಹಿಂದಕ್ಕೆ ಪಡೆದರು.