ಗಂಗಾವತಿ: ತಾಲೂಕಿನ ಕೆಲ ಶಾಲೆಗಳಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ವಠಾರದ ಬದಲಿಗೆ ಶಾಲೆಗಳಲ್ಲಿ ಮಕ್ಕಳಿಗೆ ತರಗತಿ ನಡೆಸುತ್ತಿರುವ ಬಗ್ಗೆ ಈಟಿವಿ ಭಾರತದಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ, ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯಾಗಮ ಕಾರ್ಯಕ್ರಮದನ್ವಯ ಶಿಕ್ಷಕರು ಮಕ್ಕಳಿರುವ ಆಯಾ ವಠಾರ ಅಥವಾ ಕೇರಿಗಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡಬೇಕು. ಆದರೆ ಆನೆಗೊಂದಿ ಕ್ಲಸ್ಟರ್ ವ್ಯಾಪ್ತಿಗೆ ಬರುವ ರಾಂಪುರ, ಸೋನಿಯಾ ನಗರ, ಚಿಕ್ಕರಾಂಪುರ, ಹನುಮನಹಳ್ಳಿ, ಸಣಾಪುರ ಹಾಗೂ ಚಿಕ್ಕರಾಂಪುರದ ಸರ್ಕಾರಿ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳನ್ನು ಶಿಕ್ಷಕರು ಶಾಲೆಗೆ ಕರೆಸಿಕೊಂಡು ಪಾಠ ಮಾಡ್ತಿದ್ದಾರೆ. ಈ ಹಿನ್ನೆಲೆ ಶಿಕ್ಷಣಾಧಿಕಾರಿ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು.
ಮಾಧ್ಯಮದಲ್ಲಿ ಪ್ರಕಟವಾದ ವರದಿ ಆಧರಿಸಿ ಆಯಾ ಶಾಲಾ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವ ಬಿಇಒ, ಮೂರು ದಿನದೊಳಗೆ ನೋಟಿಸ್ಗೆ ಉತ್ತರಿಸಬೇಕು ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಉಲ್ಲೇಖಿಸಿದ್ದಾರೆ.
ಏನಿದು "ವಿದ್ಯಾಗಮ" ಕಾರ್ಯಕ್ರಮ:
ಕೊರೊನಾ ಬಿಕ್ಕಟ್ಟಿನ ಕಾರಣ ಶಾಲೆಗಳು ಬಾಗಿಲು ಮುಚ್ಚಿವೆ. ಹೀಗಾಗಿ ಕಲಿಕೆಯಿಲ್ಲದೇ ಮನೆಯಲ್ಲೇ ಉಳಿದಿರುವ ಮಕ್ಕಳನ್ನು ಮತ್ತೆ ವಿದ್ಯಾಭ್ಯಾಸದ ಕಡೆಗೆ ಸೆಳೆದು ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು "ವಿದ್ಯಾಗಮ" ಎಂಬ ಕಾರ್ಯಕ್ರಮ ಸಾರ್ವಜನಿಕ ಶಿಕ್ಷಣ ಇಲಾಖೆ ಜಾರಿಗೊಳಿಸಿದೆ.
ಈ ಕಾರ್ಯಕ್ರಮದಡಿ ಆಯಾ ಶಾಲಾ ವ್ಯಾಪ್ತಿಯ ಒಂದು ಊರಿನ ಮಕ್ಕಳನ್ನು ಯಾವುದಾದರೂ ಒಂದು ಮನೆಯಲ್ಲಿ ಒಂದುಗೂಡಿಸಿ ಶಿಕ್ಷಕರೇ ತೆರಳಿ ಪಾಠ ಮಾಡುತ್ತಾರೆ. ಶಾಲೆ ಪ್ರಾರಂಭವಾಗದ ಹಿನ್ನೆಲೆ ಇಲಾಖೆ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದ್ದು, ಮಕ್ಕಳಿಗೆ ಪಾಠದ ಜೊತೆಗೆ ಹೋಂ ವರ್ಕ್ ಸೇರಿದಂತೆ ಇತ್ಯಾದಿ ಚಟುವಟಿಕೆ ಮಾಡಿಸಲಾಗುತ್ತದೆ.