ಕೊಪ್ಪಳ: ಪ್ರತಿಕ್ರಿಯೆ ಕೇಳಲು ಮುಂದಾದ ಮಾಧ್ಯಮ ಪ್ರತಿನಿಧಿಗಳ ಮೇಲೆ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಕಿಡಿ ಕಾರಿದ ಘಟನೆ ತಾಲೂಕಿನ ಮುನಿರಾಬಾದ್ ಜಲಾಶಯದ ಬಳಿ ನಡೆದಿದೆ.
ತಾಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯದ ಎಡದಂಡೆಯ ಮೇಲ್ಮಟ್ಟದ ನಾಲೆಯ ಗೇಟ್ ದುರಸ್ತಿ ಕಾರ್ಯ ನಡೆಯುತ್ತಿರುವ ಸ್ಥಳಕ್ಕೆ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಘಟನೆ ಕುರಿತಂತೆ ಹಾಗೂ ಫೋನ್ ಕದ್ದಾಲಿಕೆ ಪ್ರಕರಣ ಕುರಿತಂತೆ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಪಡೆಯಲು ಮುಂದಾಗಿದ್ದಾರೆ. ಆದರೆ, ಆರಂಭದಲ್ಲಿಯೇ ದರ್ಪದಿಂದ ಮಾತನಾಡಿದ್ದಾರೆ. ಅಲ್ಲದೆ ಏಕ ವಚನದಿಂದಲೇ ನಿಂದಿಸಿ ತಮ್ಮ ಅಧಿಕಾರದ ದರ್ಪ ತೋರಿದ್ದಾರೆ.
ಈ ಸಂದರ್ಭದಲ್ಲಿ ನಾಡಗೌಡ ಮಾತ್ರವಲ್ಲದೇ ಅವರ ಜೊತೆ ಬಂದಿದ್ದ ವ್ಯಕ್ತಿಯೂ ಇದೇ ರೀತಿ ವರ್ತನೆ ತೋರಿದ್ದಾರೆ. ಇದರಿಂದ ಕೆರಳಿದ ಮಾಧ್ಯಮ ಪ್ರತಿನಿಧಿಗಳು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಅವರ ಹಿಂಬಾಲಕ ವ್ಯಕ್ತಿಯನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡ ಪರಿಣಾಮ ಅಲ್ಲಿಂದ ಅವರು ಕಾಲ್ಕಿತ್ತರು.