ಕೊಪ್ಪಳ: ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಇರುವ ನಗರಸಭೆಗೆ ಸೇರಿದ ವಾಣಿಜ್ಯ ಮಳಿಗೆ ಕಟ್ಟಡಕ್ಕೆ ಸಂಬಂಧಿಸಿದಂತೆ ಬಾಡಿಗೆದಾರ ಮತ್ತು ನಗರಸಭೆ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ.
ಹೌದು, ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಇರುವ ನಗರಸಭೆಗೆ ಸೇರಿದ ತ್ರೀಕೋನಾಕಾರದ ಕಟ್ಟಡದಲ್ಲಿ 21 ವಾಣಿಜ್ಯ ಉದ್ದೇಶದ ಮಳಿಗೆಗಳು ಇವೆ. 1997 ರಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ 21 ಜನರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಆದರೆ ಈಗ ಕಟ್ಟಡ ಶಿಥಿಲಗೊಂಡಿದ್ದು, ಅದನ್ನು ನೆಲಸಮ ಮಾಡಲು ನಗರಸಭೆ ನಿರ್ಧಾರ ಮಾಡಿದೆ. ಹೀಗಾಗಿ ಆ ಕಟ್ಟಡದಲ್ಲಿರುವ ಬಾಡಿಗೆದಾರರಿಗೆ ಮಳಿಗೆಗಳನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದೆ. ಹೀಗಾಗಿ ಮಳಿಗೆಗಳಲ್ಲಿರುವ ಬಾಡಿಗೆದಾರರು ನಗರಸಭೆಯ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ.
ಕಟ್ಟಡ ಶಿಥಿಲಗೊಂಡಿಲ್ಲ. ಇನ್ನೂ ಹತ್ತಾರು ವರ್ಷ ಬಾಳಿಕೆ ಬರುವ ಸಾಮರ್ಥ್ಯ ಹೊಂದಿದೆ. ಆದರೆ ಕಟ್ಟಡವನ್ನು ನೆಲಸಮಗೊಳಿಸಿ ಅಲ್ಲಿ ಕನಕದಾಸರ ಮೂರ್ತಿಯೊಂದಿಗೆ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶದಿಂದ ಬಾಡಿಗೆದಾರರನ್ನು ಖಾಲಿ ಮಾಡಿಸಿ, ಕಟ್ಟಡ ನೆಲಸಮಗೊಳಿಸಲು ನಗರಸಭೆ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಮೊದಲೇ ಕೊರೊನಾದಿಂದ ಸಂಕಷ್ಟ ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಳಿಗೆಗಳನ್ನು ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. ನಮಗೆ ಸಮಯವಕಾಶ ನೀಡಬೇಕು ಎಂದು ಬಾಡಿಗೆದಾರರು ಒತ್ತಾಯಿಸಿದ್ದಾರೆ.
ಕಟ್ಟಡದ ಸಾಮರ್ಥ್ಯ ಕುರಿತಂತೆ ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ. ಅದು ಶಿಥಿಲಗೊಂಡಿದ್ದು, ಅಪಾಯ ಸಂಭವಿಸುವ ಮುನ್ನ ಅದನ್ನು ನೆಲಸಮಗೊಳಿಸುವುದು ಸೂಕ್ತ ಎಂದು ವರದಿ ನೀಡಿದ್ದಾರೆ. ಹೀಗಾಗಿ ಕಟ್ಟಡವನ್ನು ನಾವು ನೆಲಸಮಗೊಳಿಸಿ, ನಗರದ ಸೌಂದರ್ಯೀಕರಣ ಹೆಚ್ಚಿಸುವಂತಹ ಒಂದು ಮಾಸ್ಟರ್ ಪ್ಲಾನ್ ಮಾಡಲಾಗಿದೆ ಎಂದು ನಗರಸಭೆ ಆಯುಕ್ತ ಮಂಜುನಾಥ ತಿಳಿಸಿದ್ದಾರೆ.
ಕಟ್ಟಡದಲ್ಲಿರುವ ಬಾಡಿಗೆದಾರರ ಬಾಡಿಗೆ ಕರಾರು 2004 ರಲ್ಲಿಯೇ ಮುಗಿದಿದೆ. ನಂತರ ಬಂದ ನಗರಸಭೆ ಅಧಿಕಾರಿಗಳು ಇವರ ಕರಾರನ್ನು ನವೀಕರಣ ಮಾಡದೇ ಹಾಗೆ ಬಾಡಿಗೆ ಮುಂದುವರೆಸುತ್ತಾ ಬಂದಿದ್ದಾರೆ. ಇದು ನಗರಸಭೆ ಅಧಿಕಾರಿಗಳು ಅಂದಿನಿಂದ ಮಾಡಿಕೊಂಡು ಬಂದಿರುವ ದೊಡ್ಡ ತಪ್ಪು. ಕರಾರು ಮುಗಿದ ವರ್ಷದಿಂದ ಬಾಡಿಗೆದಾರರಿಗೆ ಹೊಸ ಕರಾರು ಮಾಡಬೇಕಿತ್ತು. ಆದರೆ ಅಂದಿನ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಈಗ ಅಲ್ಲಿನ ಬಾಡಿಗೆದಾರರು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಆದರೆ ಕಾನೂನಾತ್ಮಕ ದೃಷ್ಟಿಯಿಂದ ಇಲ್ಲಿರುವ ಬಾಡಿಗೆದಾರರು ಮಳಿಗೆಗಳನ್ನು ಖಾಲಿ ಮಾಡಬೇಕು ಎಂದರು.