ಕೊಪ್ಪಳ: ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಬೇಕು ಎಂದು ಈ ಹಿಂದೆ ಒತ್ತಾಯ ಮಾಡಿದ್ದೆ. ಆದರೆ, ಮುಂದಿನ ದಿನಗಳಲ್ಲಿ ನಮ್ಮ ಸಮಾಜದವರನ್ನು ಮುಖ್ಯಮಂತ್ರಿ ಮಾಡಿ ಎಂದು ಕೇಳುವುದಾಗಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಸ್ಥಾನ ನೀಡುತ್ತೇವೆ ಎನ್ನುವುದನ್ನು ನಾನು ಮಾಧ್ಯಮದಲ್ಲಿ ನೋಡಿದ್ದೆ. ಅದರಂತೆ ನಮ್ಮ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡುವಂತೆ ಈ ಹಿಂದೆ ನಾನು ಮಾಧ್ಯಮಗಳ ಮೂಲಕ ಆಗ್ರಹಿಸಿದ್ದೆ. ಆದರೆ, ಡಿಸಿಎಂ ಮಾಡುವ ಅಧ್ಯಾಯ ಈಗ ಮುಗಿದಂತೆ ಆಗಿದೆ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ವಾಲ್ಮೀಕಿ ಸಮಾಜ ಬಿಜೆಪಿಗೆ ಹೆಚ್ಚು ಬೆಂಬಲ ನೀಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ವಾಲ್ಮೀಕಿ ಸಮಾಜದವರನ್ನು ಸಿಎಂ ಮಾಡಿ ಎಂದು ಬೇಡಿಕೆ ಇಡುತ್ತೇವೆ. ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರಿಗೆ ಈ ನಿಟ್ಟಿನಲ್ಲಿ ಒತ್ತಾಯ ಮಾಡುತ್ತೇವೆ ಎಂದರು.
ಕುರುಬ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂಬ ಹೋರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸ್ವಾಮೀಜಿ, 'ಅವರವರ ಹಕ್ಕುಗಳನ್ನು ಕೇಳುವುದು ಸಾಂವಿಧಾನಿಕ ಹಕ್ಕು. ಎಸ್ಟಿ ಸೇರಿದಂತೆ ಯಾವುದೇ ಜಾತಿಗೆ ಸೇರಲು ಮಾನದಂಡಗಳಿವೆ. ಆ ಮಾನದಂಡಗಳಿದ್ದರೆ ಅವರು ಸೇರಲಿ. ನಾವು ಅದನ್ನು ಸ್ವಾಗತಿಸುತ್ತೇವೆ. ಅವರು ಈ ಹಿಂದೆ ಯಾವ ಜಾತಿಯಲ್ಲಿ ಎಷ್ಟು ಮೀಸಲಾತಿ ಪಡೆಯುತ್ತಿದ್ದರೋ ಅಷ್ಟು ಪ್ರಮಾಣದ ಮೀಸಲಾತಿಯನ್ನು ತೆಗೆದುಕೊಂಡು ಬಂದು ಸೇರಲಿ. ಅದಕ್ಕೆ ನಮ್ಮ ಸ್ವಾಗತವಿದೆ. ಆದರೆ, ಅದನ್ನು ಬಿಟ್ಟು ಬಂದು ಸೇರಿದರೆ ಅದಕ್ಕೆ ನಮ್ಮ ವಿರೋಧವಿದೆ' ಎಂದು ಹೇಳಿದರು.