ಕೊಪ್ಪಳ: ಬಿ.ಶ್ರೀರಾಮಲುಗೆ ಡಿಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿ ವಾಲ್ಮೀಕಿ ನಾಯಕ ಸಮುದಾಯದ ಜನರು ಪ್ರತಿಭಟನೆ ನಡೆಸಿದರು.
ನಗರದ ಅಶೋಕ ಸರ್ಕಲ್ನಿಂದ ಬಸವೇಶ್ವರ ಸರ್ಕಲ್ವರೆಗೆ ಪ್ರತಿಭಟನೆ ನಡೆಸಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಯ ಸಂದರ್ಭದಲ್ಲಿ ಬಿ.ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಲಾಗುತ್ತದೆ ಎಂದು ಬಿಜೆಪಿ ನಾಯಕರು ವಾಲ್ಮೀಕಿ ನಾಯಕ ಸಮುದಾಯಕ್ಕೆ ಮಾತು ಕೊಟ್ಟಿದ್ದಾರೆ. ಈಗ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಿಲ್ಲ. ಇದರಿಂದ ನಮ್ಮ ಸಮುದಾಯಕ್ಕೆ ತುಂಬಾ ನೋವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಬಿಜೆಪಿ ನಾಯಕರು ಬಿ. ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡುವ ಮೂಲಕ ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ರಾಜ್ಯ ಸರ್ಕಾರ ಉದ್ಯೋಗ, ಶಿಕ್ಷಣದ ಮೀಸಲಾತಿಯಲ್ಲಿ ಶೇ. 7.5ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದರು.