ಕೊಪ್ಪಳ : ಮಹಾದಾಯಿ ವಿಚಾರದಲ್ಲಿ ಗೋವಾದವರು ತಮ್ಮ ಮುಖ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ ಎಂದು ವಸತಿ ಇಲಾಖೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಮಹಾದಾಯಿ ವಿಚಾರದಲ್ಲಿ ಗೋವಾ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಗೋವಾದವರು ತಮ್ಮ ಉಳಿವಿಗಾಗಿ ಏನೋ ಮಾಡುತ್ತಿದ್ದಾರೆ. ನ್ಯಾಯಾಲಯದಲ್ಲಿ ಇದು ತೀರ್ಮಾನವಾಗಿದೆ. ಮಹಾದಾಯಿ ನಮ್ಮಲ್ಲಿಯೇ ಹುಟ್ಟಿ ಗೋವಾಗೆ ಹರಿಯುತ್ತದೆ. ಆದರೂ ಅವರು ಕೋರ್ಟ್ಗೆ ಹೋಗಿರುವುದು ದಡ್ಡತನ. ಯಾವ ಉದ್ದೇಶಕ್ಕೆ ಕೋರ್ಟ್ಗೆ ಹೋಗಿದ್ದಾರೆಯೋ ಗೊತ್ತಿಲ್ಲ. ಈ ವಿಷಯದ ಕುರಿತು ಈಗಾಗಲೇ ನಮ್ಮ ಸಚಿವರಾದ ಬಸವರಾಜ್ ಬೊಮ್ಮಾಯಿ ಮತ್ತು ರಮೇಶ ಜಾರಕಿಹೊಳಿ ಅವರು ದೆಹಲಿಗೆ ಹೋಗಿದ್ದಾರೆ ಎಂದರು.
ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿಷಯದಲ್ಲಿ ದಯವಿಟ್ಟು ಕಾಂಟ್ರವರ್ಸಿ ಮಾಡಬೇಡಿ. ವಿಜಯೇಂದ್ರ ಯಡಿಯೂರಪ್ಪ ಮಗನಾಗಿ ಹುಟ್ಟಿದ್ದೇ ತಪ್ಪಾ? ವಿಜಯೇಂದ್ರ ಏನು ಅರ್ಜಿ ಹಾಕಿದ್ದರಾ? ಎಂದು ಸೋಮಣ್ಣ ಪ್ರಶ್ನಿಸಿದರು. ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆಗ್ತೀನಿ ಅಂತಾ ಕನಸು ಕಂಡಿದ್ರಾ? ಎಂದು ಪ್ರಶ್ನಿಸಿದ ಸಚಿವರು, ಯಡಿಯೂರಪ್ಪ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಏನಾದರೂ ಮಾತಾಡಲಿ, ನಾನು ಟೀಕೆ ಮಾಡಲ್ಲ. ಐದು ವರ್ಷ ಸಿಎಂ ಆಗಿದ್ದವರಿಗೆ ಗಾಂಭೀರ್ಯತೆ ಮುಖ್ಯ. ಸಿದ್ದರಾಮಯ್ಯ ಸಿಎಂ ಆಗುವ ಸಮಯದಲ್ಲಿ ಅರ್ಹತೆ ಇದ್ದವರು ಬಹಳ ಜನ ಇದ್ದರು. ಆದರೆ, ಹಣೆ ಬರಹದಿಂದ ಸಿದ್ದರಾಮಯ್ಯ ಸಿಎಂ ಆದರು. ಸಿದ್ದರಾಮಯ್ಯ ಮುಂದಿನ ಸಿಎಂ ನಾನೇ ಅಂತಿದ್ದಾರೆ. ಆದರೆ, ನಿವೃತ್ತಿ ಆಗ್ತೀನಿ ಅಂತಾ ಅವರೇ ಬಹಳ ಸಲ ಹೇಳಿದ್ದಾರೆ ಎಂದರು.