ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆ ಎದುರಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ ಜಿಲ್ಲೆಯಲ್ಲಿ ರೈತರು ಬಿತ್ತಿದ್ದ ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳು ಚೆನ್ನಾಗಿ ಬೆಳೆಯುತ್ತಿವೆ. ಬೆಳೆಯ ಬೆಳವಣಿಗೆಗೆ ಪೂರಕವಾಗಿ ಉತ್ತಮವಾಗಿ ಮಳೆಯೂ ಸಹ ಆಗುತ್ತಿದೆ. ಆದರೆ, ಈಗ ಮಳೆಯಿಂದಾಗಿ ಬೆಳೆಗಳು ಬಿಳುಪಾಗುತ್ತಿದೆ. ಹೀಗಾಗಿ ಹೊಲಕ್ಕೆ ಗೊಬ್ಬರ ಹಾಕಬೇಕು. ಆದರೆ ಕಳೆದ 15 ದಿನಗಳಿಂದ ರೈತರು ಯೂರಿಯಾ ಗೊಬ್ಬರಕ್ಕಾಗಿ ಎಲ್ಲಿ ಹೋದರೂ ರೈತರಿಗೆ ಗೊಬ್ಬರ ಸಿಗುತ್ತಿಲ್ಲ.
ಸೊಸೈಟಿಗಳಲ್ಲಿ ಒಂದು ಚೀಲ ಯೂರಿಯಾ ಗೊಬ್ಬರವನ್ನು 280 ರೂಗಳಿಂದ ರಿಂದ 300 ರೂಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ಮಾರ್ಕೆಟ್ ನಲ್ಲಿ ಒಂದು ಚೀಲ ಯೂರಿಯಾ ಗೊಬ್ಬರಕ್ಕೆ 400 ರೂ. ಇದೆ. ಮಾತ್ರವಲ್ಲದೇ ಯೂರಿಯಾ ಬೇಕೆಂದರೆ ಯೂರಿಯಾದ ಜೊತೆಗೆ ಕಾಂಪ್ಲೆಕ್ಸ್ ಗೊಬ್ಬರ ತೆಗೆದುಕೊಳ್ಳಲೇಬೇಕು ಎಂಬ ಷರತ್ತನ್ನು ವ್ಯಾಪಾರಿಗಳು ಹಾಕುತ್ತಿದ್ದಾರೆ. ಕಾಂಪ್ಲೆಕ್ಸ್ ಗೊಬ್ಬರ ತೆಗೆದುಕೊಳ್ಳದಿದ್ದರೆ ಯೂರಿಯಾ ಸಿಗುವುದಿಲ್ಲ. ಇನ್ನು ಸೊಸೈಟಿಗಳಿಗೆ ಯೂರಿಯಾ ಗೊಬ್ಬರ ಪೂರೈಕೆ ಪ್ರಮಾಣ ಕಡಿಮೆ ಇದೆ. ಹೀಗಾಗಿ ಎಲ್ಲಾ ರೈತರಿಗೂ ಸಿಗುತ್ತಿಲ್ಲ. ಒಬ್ಬರಿಗೆ ಕೇವಲ 2 ಚೀಲ ಮಾತ್ರ ಕೊಡಲಾಗ್ತಿದ್ದು, ಅಗತ್ಯವಿದ್ದಷ್ಟು ಗೊಬ್ಬರ ಕೊಡುತ್ತಿಲ್ಲ ಅಂತಾರೆ ರೈತರು.
ಮತ್ತೊಂದು ಕಡೆ ಬೇಸಿಗೆ ಕಾಲದಲ್ಲಿ ಯೂರಿಯಾ ಸ್ಟಾಕ್ ಮಾಡಿಕೊಂಡು ಇಂತಹ ಸಂದರ್ಭದಲ್ಲಿ ವ್ಯಾಪಾರಿಗಳು ಕೃತಕ ಅಭಾವ ಸೃಷ್ಠಿಸುತ್ತಿದ್ದಾರೆ ಎಂಬ ಆರೋಪ ಸಹ ಬಲವಾಗಿದೆ.