ಕೊಪ್ಪಳ: ಇಂದು ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದೆ.
ಜಿಲ್ಲೆಯ ಕಾರಟಗಿ ಪುರಸಭೆ, ಭಾಗ್ಯನಗರ, ಕುಕನೂರು, ಕನಕಗಿರಿ, ತಾವರಗೆರೆ ಪಟ್ಟಣ ಪಂಚಾಯತ್ ಚುನಾವಣೆ ನಡೆಯುತ್ತಿದ್ದು, 100 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಇಂದು 77,655 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 253 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಮತದಾನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಭಾಗ್ಯನಗರ ಪಟ್ಟಣದ ಮತಗಟ್ಟೆ ಸಂಖ್ಯೆ 6 ರಲ್ಲಿ ಕುಟುಂಬಸ್ಥರ ಸಹಾಯದಿಂದ 90 ವರ್ಷದ ವೃದ್ಧೆಯೊಬ್ಬರು ಆಗಮಿಸಿ ಮತದಾನ ಮಾಡಿದ್ದು ಗಮನ ಸೆಳೆಯಿತು.