ಕುಷ್ಟಗಿ(ಕೊಪ್ಪಳ): ಪಟ್ಟಣ ವ್ಯಾಪ್ತಿಯ 13ನೇ ವಾರ್ಡ್ನ ನಿಡಶೇಸಿ ಹಳೆ ರಸ್ತೆಗೆ ಹೊಂದಿಕೊಂಡಿರುವ ರೈತರೊಬ್ಬರ ಜಮೀನನ್ನು ಪುರಸಭೆ ಒತ್ತುವರಿ ಮಾಡಿಕೊಂಡು ಚರಂಡಿ ನಿರ್ಮಿಸಿದ್ದು, ಅಲ್ಲದೇ ರೈತನ ಅವರ ಜಮೀನಿಗೆ ಕೊಳಚೆ ನೀರು ಹರಿಸುತ್ತಿದೆ. ಈ ಚರಂಡಿ ನೀರಿನಿಂದ ಇಡೀ ಜಮೀನು ಹಾಳಾಗಿದ್ದು, ಚರಂಡಿ ತ್ಯಾಜ್ಯದಿಂದ ತುಂಬಿದೆ. ಬೆಳೆ ಬೆಳೆಯುವ, ಬೆಲೆ ಬಾಳುವ ಜಮೀನು ಕಣ್ಮುಂದೆ ಹಾಳಾಗಿದೆ ಎಂದು ಆರೋಪಿಸಲಾಗಿದೆ.
ವ್ಯವಸ್ಥಿತವಾಗಿ ವೈಜ್ಞಾನಿಕವಾಗಿ ಚರಂಡಿ ನೀರು ಮಾರ್ಗವಾಗಿ ಹರಿಸಿ ರಾಜ ಕಾಲುವೆಗೆ ಸೇರಿಸದೇ, ಅವೈಜ್ಞಾನಿಕ ಚರಂಡಿ ನಿರ್ಮಿಸಿದ ಪರಿಣಾಮ ತಮ್ಮ ಜಮೀನಿಗೆ ಚರಂಡಿ ನೀರು ಹರಿಯುತ್ತಿದೆ. ಇದರಿಂದ ತಮ್ಮ ಸ.ನಂ.201 ರ 2 ಎಕರೆ ಹೊಲ ಸಂಪೂರ್ಣ ಹಾಳಾಗಿದೆ ಎಂದು ರೈತ ಮೊಹಮ್ಮದ್ ಅಫ್ತಾಬ್ ಹೇಳಿದ್ದಾರೆ.
ನೊಂದ ರೈತ ಮಹಮ್ಮದ್ ಅಫ್ತಾಬ್ ಅವರು ನ್ಯಾಯಕ್ಕಾಗಿ ಪುರಸಭೆ, ತಹಶೀಲ್ದಾರ್ ಕಚೇರಿಗೆ ಹಲವು ಬಾರಿ ಮನವಿ ಮಾಡಿದರು ನ್ಯಾಯ ಸಿಗದೇ ಕಂಗಾಲಾಗಿದ್ದಾರೆ. ತಮ್ಮ ಪಿತ್ರಾರ್ಜಿತ ಈ ಜಮೀನಿನಲ್ಲಿ ಚರಂಡಿ ನೀರಿನಿಂದಾಗಿ ಜಮೀನಿನಲ್ಲಿ ಕಾಲಿಡಲು ಸಾದ್ಯವಾಗುತ್ತಿಲ್ಲ. ಯಾವೂದೇ ಬೆಳೆ ಬೆಳೆಯಲಾಗುತ್ತಿಲ್ಲ. ಪುರಸಭೆ ಅವೈಜ್ಞಾನಿಕವಾಗಿ 8 ಲಕ್ಷ ರೂ.ವೆಚ್ಚದಲ್ಲಿ ಭೂಸೇನಾ ನಿಗಮ ನಿರ್ಮಿಸಿದ ಚರಂಡಿ ವ್ಯವಸ್ಥೆಯಿಂದಾಗಿ ಚರಂಡಿ ಮಾರ್ಗವಾಗಿ ಹರಿದು ರಾಜಕಾಲುವೆ ಸೇರದೇ ಈ ಜಮೀನಿಗೆ ನುಗ್ಗುತ್ತಿದೆ. ಈ ನೀರು ಇನ್ನೋರ್ವ ರೈತ ಮಹಿಳೆ ಮರಿಯಂಬಿ ಮಾಟಲದಿನ್ನಿ ಅವರ ಜಮೀನಿಗೆ ನೀರು ನೂಗ್ಗಿ ಸಜ್ಜೆ ಬೆಳೆ ಹಾಳಾಗಿದೆ.
ಈ ಬಗ್ಗೆ ಪುರಸಭೆ, ತಹಶೀಲ್ದಾರ್ ಕಚೇರಿಗೆ ಹಲವು ಬಾರಿ ಮನವಿ ಮಾಡಿದರು ನ್ಯಾಯ ಸಿಕ್ಕಿಲ್ಲ. ಈ ಪರಿಸ್ಥಿತಿಯಲ್ಲಿ ಚರಂಡಿ ಅವ್ಯವಸ್ಥೆ ಸರಿಪಡಿಸದೇ ಇದ್ದಲ್ಲಿ ನಮ್ಮ ಜಮೀನು ಉಳಿಸಿಕೊಳ್ಳುವ ಸಲುವಾಗಿ, ಜಮೀನಿಗೆ ನುಗ್ಗುವ ಹಳೆ ಚರಂಡಿ ಮಾರ್ಗ ಬಂದ್ ಮಾಡಲಾಗುವುದು. ಇದರಿಂದ ಸ್ಥಳೀಯರಿಗೆ ತೊಂದರೆಯಾದರೆ ತಾವು ಜವಾಬ್ದಾರಲ್ಲ ಇದಕ್ಕೆ ಪುರಸಭೆ ಅಧಿಕಾರಿಗಳು ನೇರ ಹೊಣೆಗಾರರು ಎಂದು ರೈತ ಮೊಹಮ್ಮದ್ ಅಫ್ತಾಬ್ ಎಚ್ಚರಿಸಿದ್ದಾರೆ.