ಕುಷ್ಟಗಿ (ಕೊಪ್ಪಳ): ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಅನ್ಯ ಜಿಲ್ಲೆಗಳಿಗೆ ಗುಳೇ ಹೋಗುವುದನ್ನು ತಡೆದು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಕುಷ್ಟಗಿ ತಹಶೀಲ್ದಾರ್ ಎಂ.ಸಿದ್ದೇಶ ಅವರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಕುಷ್ಟಗಿ ತಾಲೂಕಾ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಜಂಟಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಆರ್.ಕೆ. ದೇಸಾಯಿ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಿದ್ದು, ಆ ಪ್ರದೇಶದಲ್ಲಿ ಭತ್ತದ ನಾಟಿಗೆ ಇಲ್ಲಿನ ಜನ ತೆರಳಿ ಕೊರೊನಾ ರೋಗ ಅಂಟಿಸಿಕೊಳ್ಳುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಜನರ ಸಲುವಾಗಿಯೇ ಇದ್ದು, 100 ಮಾನವ ದಿನಗಳ ಬದಲಿಗೆ 200 ಮಾನವ ದಿನಗಳಿಗೆ ಸೃಜಿಸುವಂತೆ ಒತ್ತಾಯಿಸಿದರು.
ಈ ತಾಲೂಕಿನ ಜನರನ್ನು ಯಾವೂದೇ ಕಾರಣಕ್ಕೂ ಗುಳೇ ಹೋಗದಂತೆ ತಡೆಯಬೇಕೆಂದರು. ಬಿಸಿ ಊಟ ಯೋಜನೆಯ ಅಡುಗೆ ಮಾಡುವ ಸಿಬ್ಬಂದಿಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡುವಂತೆ ಹಕ್ಕೊತ್ತಾಯ ಮಂಡಿಸಲಾಯಿತು.