ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆಯ ಕಿತ್ತು ಹೋಗಿದ್ದ ಗೇಟ್ನ ಸ್ಥಳದಿಂದ ನೀರು ಹೊರ ಹೋಗದಂತೆ ಬಂದ್ ಮಾಡುವಲ್ಲಿ ನಡೆಸಿದ ಕಾರ್ಯಾಚರಣೆ ರಾತ್ರಿ ಸಕ್ಸಸ್ ಆಗಿದೆ.ಇದರಿಂದಾಗಿ ಜಲಾಶಯದ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಮೂರು ದಿನದ ಹಿಂದೆ ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ನಾಲೆಯ ಗೇಟ್ ಕಿತ್ತುಹೋದ ಪರಿಣಾಮ ಕಾಲುವೆ ಮೂಲಕ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಈ ನೀರು ಮುನಿರಾಬಾದ್ನ ಹಲವಾರು ಮನೆಗಳಿಗೆ ನುಗ್ಗಿ ಪ್ರವಾಹ ಪರಸ್ಥಿತಿ ತಲೆದೂರಿತ್ತು. ಕಿತ್ತು ಹೋಗಿರುವ ಗೇಟ್ ಸರಿಪಡಿಸಲು ಜಲಾಶಯದ ಅಧಿಕಾರಿಗಳು ಸತತ ಮೂರು ದಿನಗಳಿಂದ ನಾನಾ ಪ್ರಯತ್ನ ನಡೆಸಿದ್ದರೂ ಅದು ಫಲಪ್ರದವಾಗಿರಲಿಲ್ಲ.
ನಾಲ್ಕನೇ ದಿನವಾದ ಇಂದು ಸಹ ಸರಿಪಡಿಸುವ ಕಾರ್ಯ ಮುಂದುವರೆದಿತ್ತು. ರೋಪ್ ಬಲೆಯಲ್ಲಿ ಮರಳಿನ ಚೀಲಗಳ ಹೊಂದಿಸಿ ಒಂದು ಮೂಟೆ ಮಾಡಿ ವೆಂಟ್ ಬಳಿ ಇಳಿಸುವ ಪ್ಲಾನ್ ಸಕ್ಸಸ್ ಆಗಿದೆ. ಸಂಜೆಯ ವೇಳೆಗೆ ಬಂದ ಮಳೆಯಿಂದಾಗಿ ಕಾರ್ಯಾಚರಣೆಗೆ ಒಂದಿಷ್ಟು ಅಡ್ಡಿಯಾಯಿತು. ಸುಮಾರು100 ಟನ್ ಸಾಮರ್ಥ್ಯದ ಕ್ರೇನ್ ಮೂಲಕ ರೋಪ್ ಬಲೆಯಲ್ಲಿ ರೆಡಿ ಮಾಡಲಾಗಿದ್ದ ಮರಳಿನ ಚೀಲದ ಬೃಹತ್ ಮೂಟೆಯನ್ನು ಮೇಲ್ಮಟ್ಟದ ಕಾಲುವೆಯ ಬಾಯಿಗೆ ಇಳಿಸಲಾಗಿದೆ.
ಇದರಿಂದಾಗಿ ಅಪಾರ ಪ್ರಮಾಣದಲ್ಲಿ ಹೋಗುತ್ತಿದ್ದ ನೀರು ಬಂದ್ ಆಗಿದೆ. ಸತತ ನಾಲ್ಕು ದಿನಗಳ ಪರಿಶ್ರಮದ ಈ ಕಾರ್ಯಾಚರಣೆ ಸಕ್ಸಸ್ ಆಗುತ್ತಿದ್ದಂತೆ ಅಲ್ಲಿದ್ದವರು ಕೇಕೆ ಹಾಕಿ ಖುಷಿ ವ್ಯಕ್ಯಪಡಿಸಿದರು ಎಂದು ತಿಳಿದು ಬಂದಿದೆ. ಅಲ್ಲದೆ, ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.