ಕೊಪ್ಪಳ: ಕರ್ತವ್ಯಕ್ಕೆ ಹಾಜರಾಗುವಂತೆ ಮನವೊಲಿಸಲು ಆಗಮಿಸಿದ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸಾರಿಗೆ ನೌಕರರ ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
'ನಾವೇನ್ ಬೇರೆ ದೇಶದಿಂದ ಬಂದಿವಾ?, ಈಗ ಕೆಲಸಕ್ಕೆ ಬಾ ಎಂದು ಏಸಿ ರೂಂನಲ್ಲಿ ಕುಳಿತು ಹೇಳುವವರಿಗೆ ಏನಾಗಬೇಕು?, ಕಷ್ಟಪಡುತ್ತಿರುವವರು ನಾವು. ಸಾರಿಗೆ ಸಚಿವ ಲಕ್ಷ್ಮಣ ಸವದಿ ಬೆಳಗ್ಗೆಯಿಂದ ಬಸ್ನಲ್ಲಿ ಓಡಾಡಲಿ ನಮ್ಮ ಕಷ್ಟ ಗೊತ್ತಾಗುತ್ತದೆ' ಎಂದು ಕುಟುಂಬಸ್ಥರು ಆಕ್ರೋಶ ತೋರಿಸಿದರು.
'ಹೆಸರಿಗೆ ಮಾತ್ರ ನಮ್ಮ ಮನೆಯವರು ಸಾರಿಗೆ ಸಂಸ್ಥೆಯ ನೌಕರರು. ಆದರೆ ಹಬ್ಬಕ್ಕೆ ಮಕ್ಕಳಿಗೆ ಬಟ್ಟೆ ಕೊಡಿಸಲು ಆಗುತ್ತಿಲ್ಲ. ಮೊದಲು ಸರ್ಕಾರ 6 ನೇ ವೇತನ ಆಯೋಗ ಜಾರಿ ಮಾಡಲಿ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದರಿಂದಾಗಿ ಮನವೊಲಿಸಲು ಬಂದಿದ್ದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ತೆರಳಬೇಕಾಯಿತು.