ಕೊಪ್ಪಳ: ಟೊಮೆಟೊ ದಾಖಲೆ ದರದಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ಟೊಮೆಟೊ ಬೆಳೆದ ರೈತರಲ್ಲಿ ಸಂತಸ ಮೂಡಿದೆ. ಆದರೆ ಜಿಲ್ಲೆಯಲ್ಲಿ ಕಷ್ಟ ಪಟ್ಟು ಟೊಮೆಟೊ ಬೆಳೆದ ರೈತರಿಗೆ ಅಕಾಲಿಕ ಮಳೆಯು ಬರಸಿಡಿಲಿನಂತೆ ಅಪ್ಪಳಿಸಿದೆ. ಪರಿಣಾಮವಾಗಿ ಬೆಳೆ ಹೊಲದಲ್ಲಿಯೇ ಕೊಳೆತು ಹೋಗಿದ್ದು, ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ.
ಈಗ ಕಾರ್ತಿಕ ಮಾಸವಾಗಿರುವುದರಿಂದ ಮದುವೆ ಸೇರಿದಂತೆ ಇನ್ನಿತರೆ ಸಮಾರಂಭಗಳು ಆರಂಭವಾಗಿವೆ. ಇದರಿಂದಾಗಿ ಈಗ ಟೊಮೆಟೊಗೆ ಭಾರಿ ಬೇಡಿಕೆಯೂ ಇದೆ. ಆದ್ರೆ ಬೇಡಿಕೆಗೆ ತಕ್ಕಂತೆ ಟೊಮೆಟೊ ಮಾರುಕಟ್ಟೆಗೆ ಬರುತ್ತಿಲ್ಲ. ಜೊತೆಗೆ ವಾತಾವರಣ ಬದಲಾವಣೆ ಹಿನ್ನೆಲೆ ಹೆಚ್ಚಿನ ಪ್ರಮಾಣದ ಟೊಮೆಟೊ ಲಭ್ಯವಿಲ್ಲ. ಪರಿಣಾಮ, ಟೊಮೆಟೊ ಬೆಲೆ ಗಗನಕ್ಕೇರಿದೆ. ಸುಮಾರು 20-25 ಕೆಜಿ ತೂಕದ ಟೊಮೆಟೊ ಒಂದು ಕ್ರೇಟ್ಗೆ ಈಗ 1,100-1,400 ರೂಪಾಯಿಯವರೆಗೂ ದರವಿದೆ. ಇದು ಟೊಮೆಟೊ ಬೆಳೆದ ರೈತರಲ್ಲಿ ಮಂದಹಾಸ ಮೂಡಿಸುತ್ತಿದೆ.
ಈ ಮಧ್ಯೆ ಕೊಪ್ಪಳದ ಕೆಲವೆಡೆ ಅಧಿಕ ಮಳೆಯಿಂದಾಗಿ ಟೊಮೆಟೊ ಹೊಲದಲ್ಲಿಯೇ ಕೊಳೆತು ಹೋಗಿದೆ. ಅಳಿದುಳಿದ ಬೆಳೆಗೆ ಇದೇ ಮೊದಲ ಭಾರಿ ಅಧಿಕ ಪ್ರಮಾಣದ ದರ ಸಿಗುತ್ತಿದೆ. ಆದರೆ ರೈತನಿಗೆ ಈಗ ಇದರ ಲಾಭ ಸಿಗುತ್ತಿಲ್ಲ. ಪ್ರತಿ ಎಕರೆಗೆ ಕನಿಷ್ಠ 15-20 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದ ಟೊಮೆಟೊ ಈಗ ಹೊಲದಲ್ಲಿಯೇ ಕೊಳೆತಿದ್ದರಿಂದ ಅಧಿಕ ಬೆಲೆ ಸಿಕ್ಕರೂ ಟೊಮೆಟೊ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಂದಿಲ್ಲ. ಬಂದ ಇಳುವರಿ ಬಹುಪಾಲು ಮಳೆಗೆ ಆಹುತಿಯಾಗಿದೆ. ಈ ಮೊದಲು ನಿತ್ಯ 25-30 ಬಾಕ್ಸ್ ಟೊಮೆಟೊ ಮಾರುಕಟ್ಟೆಗೆ ತರುತ್ತಿದ್ದ ರೈತ ಈಗ 4-5 ಬಾಕ್ಸ್ ತರುವಂತಾಗಿದೆ.
ಕಷ್ಟಪಟ್ಟು ಟೊಮೆಟೊ ಬೆಳೆದ ರೈತನಿಗೆ ಅಕಾಲಿಕ ಮಳೆಯಿಂದ ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತೆ ಮಾಡಿದೆ. ಗ್ರಾಹಕರಿಗೆ ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಬಗ್ಗೆ ವ್ಯಾಪಾರಿಗಳನ್ನು ಕೇಳಿದರೆ ರೈತರ ಮೇಲೆಯೇ ಆರೋಪ ಹೊರಿಸುತ್ತಿದ್ದಾರೆ. ರೈತರು ಬಾಕ್ಸ್ನಲ್ಲಿ ಕೆಳಗೆ ಕೊಳೆತಿರುವ ಟೊಮೆಟೊ ಹಾಕಿರುತ್ತಾರೆ. ಮೇಲೆ ಮಾತ್ರ ಉತ್ತಮ ಟೊಮೆಟೊ ಹಾಕಿರುತ್ತಾರೆ. ಸಾಗಾಣಿಕೆ ವೆಚ್ಚದಿಂದಾಗಿ ನಮಗೂ ಲಾಭವಾಗುವುದಿಲ್ಲ ಎನ್ನುತ್ತಾರೆ.
ಇದನ್ನೂ ಓದಿ: Tomato price: ಹುಬ್ಬಳ್ಳಿಯಲ್ಲೂ ದಾಖಲೆ ಏರಿಕೆ ಕಂಡ ಟೊಮೆಟೊ.. ಗ್ರಾಹಕರು ಕಂಗಾಲು
ಈಗ ಟೊಮೆಟೊ ಬೆಳೆದ ರೈತ ಹಾಗೂ ಟೊಮೆಟೊ ಖರೀದಿಸುವ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಏನಾದರೂ ಕ್ರಮ ಕೈಗೊಳ್ಳಬೇಕೆಂದು ರೈತರು ಹಾಗೂ ಗ್ರಾಹಕರು ಆಗ್ರಹಿಸಿದ್ದಾರೆ.