ಕೊಪ್ಪಳ: ಮತದಾರರ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಶ್ರೀ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಮ್ಮಿಕೊಂಡಿದ್ದ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲಾ ಕಾಲೇಜುಗಳ ಸುಮಾರು 6 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ವೇಳೆ ವಿದ್ಯಾರ್ಥಿಗಳು 'ಎಲೆಕ್ಷನ್ ಲಿಟ್ರಸಿ ಫಾರ್ ಸ್ಟ್ರಾಂಗರ್ ಡೆಮಾಕ್ರಸಿ' ಎಂಬ ಘೋಷವಾಕ್ಯದ ಮಾನವ ಸರಪಳಿ ನಿರ್ಮಿಸಿ ಗಮನಸೆಳೆದರು. ಸುಂದರ ದೃಶ್ಯ ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದ್ಭುತವಾಗಿ ಮೂಡಿ ಬಂದಿದೆ.
ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮಾತನಾಡಿ, ಇಂದಿನ ಮಕ್ಕಳು ಮುಂದಿನ ಮತದಾರರು. ಕಡ್ಡಾಯ ಮತ್ತು ಜವಾಬ್ದಾರಿಯಿಂದ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಿ ಎಂದು ಕರೆ ನೀಡಿದರು.
ಈ ವೇಳೆ ಹೊಸದಾಗಿ ಮತದಾನದ ಹಕ್ಕು ಪಡೆದವರಿಗೆ ಮತದಾನದ ಗುರುತಿನ ಚೀಟಿಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಅಲ್ಲದೇ, ಮತದಾನ ಕುರಿತಂತೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು. ಅಪರ ಜಿಲ್ಲಾಧಿಕಾರಿ ಮಾರುತಿ ಎಂ. ಪಿ. ಉಪವಿಭಾಗಾಧಿಕಾರಿ ಸಿ. ಡಿ. ಗೀತಾ, ತಹಸೀಲ್ದಾರ ಜೆ.ಬಿ. ಮಜ್ಜಗಿ ಸೇರಿದಂತೆ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.