ಕುಷ್ಟಗಿ(ಕೊಪ್ಪಳ): ತಾಲೂಕಿನಲ್ಲಿ ತಡರಾತ್ರಿ ವರುಣನ ಅಬ್ಬರಕ್ಕೆ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಯತ್ನಿಸಿ ಹಳ್ಳದ ನೀರಿನ ರಭಸಕ್ಕೆ ಸಿಲುಕಿದ್ದ ಮೂವರು ಬೈಕ್ ಸವಾರರನ್ನು ಎರಡು ಪ್ರತ್ಯೇಕ ಘಟನೆಗಳಲ್ಲಿ ರಕ್ಷಿಸಲಾಗಿದೆ.
ಎರಡು ಬೇರೆ ಬೇರೆ ಘಟನೆಗಳಲ್ಲಿ ಎರಡು ಬೈಕ್ಗಳ ಮೂವರು ಸವಾರರನ್ನು ಗ್ರಾಮಸ್ಥರು, ಅಗ್ನಿಶಾಮಕದಳ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯಿಂದ ರಕ್ಷಿಸಿದ್ದಾರೆ.
ತಾಲೂಕಿನ ಬಂಡ್ರಗಲ್ ಗ್ರಾಮದ 6 ಜನ ಯುವಕರು ಬದಾಮಿ ತಾಲೂಕಿನ ಜಾಲಿಹಾಳ ಫಾಲ್ಸ್ ನೋಡಿ ಬೈಕ್ನಲ್ಲಿ ಮರಳುವ ವೇಳೆ ಈ ಘಟನೆ ನಡೆದಿದೆ. 6 ಜನರ ಪೈಕಿ ಮಂಜುನಾಥ ಗಂಗಾಧರಪ್ಪ ಗೌಡರ್ ತನ್ನ ಸ್ನೇಹಿತರು ಬೇಡವೆಂದರೂ ಕಾಟಾಪೂರ-ಬಂಡ್ರಗಲ್ ಮಧ್ಯೆ ಹಿರೇಹಳ್ಳ ದಾಟಲು ಯತ್ನಿಸಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ. ದಡದಲ್ಲಿದ್ದ ಸ್ನೇಹಿತರು ಕೂಗಾಡಿದ ಪರಿಣಾಮ ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದು, ರಕ್ಷಿಸಲು ಯತ್ನಿಸಿದ್ದಾರೆ. ಈ ವೇಳೆ ಗ್ರಾಮದ ಯುವಕ ಗಿರಿಯಪ್ಪ ಕಮತರ ಜೀವದ ಹಂಗು ತೊರೆದು ತುಂಬಿ ಹರಿಯುವ ಹಳ್ಳಕ್ಕೆ ಜಿಗಿದು ಮಂಜುನಾಥ ಗೌಡರ ಕೊಚ್ಚಿ ಹೋಗದಂತೆ ತಡೆದರು. ಅಗ್ನಿಶಾಮಕ ದಳದ ಠಾಣಾಧಿಕಾರಿ ಎನ್.ರಾಜು ಸಿಬ್ಬಂದಿ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಆದರೆ ಬೈಕ್ ಮಾತ್ರ ನೀರಿನಲ್ಲಿ ಕೊಚ್ಚಿ ಹೋಗಿದೆ.
ಇನ್ನೊಂದು ಪ್ರಕರಣದಲ್ಲಿ ಹೂಲಗೇರಾ-ಬಡ್ರಗಲ್ ಮಧ್ಯೆ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ವಿಜಯಪುರ ಬಸವನ ಬಾಗೇವಾಡಿಯ ವೀರೇಶ ಹಡಪದ ಹಾಗೂ ಮುತ್ತಪ್ಪ ಬಂಡ್ರಗಲ್ ಗ್ರಾಮದ ತಮ್ಮ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಈ ಹಳ್ಳ ದಾಟುತ್ತಿದ್ದ ವೇಳೆ ಬೈಕ್ ಸಮೇತ ಕೊಚ್ಚಿ ಹೋಗುತ್ತಿದ್ದರು. ಈ ವೇಳೆ ಕೂಡಲೇ ಗ್ರಾಮಸ್ಥರು ಈ ಇಬ್ಬರು ಯುವಕರನ್ನು ರಕ್ಷಿಸಿದ್ದಾರೆ.