ಕೊಪ್ಪಳ: ಗ್ರೀನ್ ಝೋನ್ನಲ್ಲಿದ್ದ ಜಿಲ್ಲೆಯಲ್ಲಿ ಇಂದು ಮೂವರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂವರು ಕೂಡ ಬೇರೆ ಬೇರೆ ರಾಜ್ಯದಿಂದ ಬಂದವರು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದ್ದಾರೆ.
ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಸೋಂಕಿತರು ಮಹಾರಾಷ್ಟ್ರ, ತಮಿಳುನಾಡು ರಾಜ್ಯದಿಂದ ಬಂದವರಾಗಿದ್ದಾರೆ. ಇವರೆಲ್ಲನ್ನೂ ಕೊಪ್ಪಳ ಹಾಗೂ ಕುಷ್ಟಗಿಯ ಬಿಸಿಎಂ ಹಾಸ್ಟೆಲ್ಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಹಾಗಾಗಿ ಯಾರೂ ಆತಂಕಪಡಬೇಕಿಲ್ಲ ಎಂದರು.
ಇವರನ್ನು ನೇರವಾಗಿ ಕ್ವಾರಂಟೈನ್ ಮಾಡಿರುವುದರಿಂದ ಕ್ವಾರಂಟೈನ್ ಮಾಡಿರುವ ಸ್ಥಳವನ್ನು ಮಾತ್ರ ಕಂಟೇನ್ಮೆಂಟ್ ಝೋನ್ ಮಾಡಲಾಗುತ್ತದೆ. ಅಲ್ಲದೆ ಇವರನ್ನು ಕ್ವಾರಂಟೈನ್ ಮಾಡಲಾಗಿದ್ದ ಸ್ಥಳದಲ್ಲಿರುವವರನ್ನು ಪ್ರೋಟೋಕಾಲ್ ಪ್ರಕಾರ ಪ್ರಾಥಮಿಕ ಸಂಪರ್ಕಿತರೆಂದು ಪರಿಗಣಿಸಲಾಗುತ್ತದೆ. ಇವರ ಜೊತೆ ಯಾರ್ಯಾರು ಸಂಪರ್ಕಕ್ಕೆ ಬಂದಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗುತ್ತದೆ. ಸ್ಕ್ರೀನಿಂಗ್ ಮಾಡಿದವರು, ಅಡುಗೆ ಮಾಡಿ, ಊಟ ಬಡಿಸಿದ ಸಿಬ್ಬಂದಿಯನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೊಪ್ಪಳದಲ್ಲಿ ಯಾವುದೇ ಚಟುವಟಿಕೆಗಳಿಗೂ ತೊಂದರೆಯಾಗುವುದಿಲ್ಲ. ಸರ್ಕಾರದಿಂದ ಹೊಸ ಮಾರ್ಗಸೂಚಿ ಏನು ಬರುತ್ತದೆಯೋ ಅದನ್ನು ಜಾರಿ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.