ಕುಷ್ಟಗಿ: ಸರ್ಕಾರ ಆರಂಭಿಸಿದ ಬಿಳಿ ಜೋಳ ಬೆಂಬಲ ಬೆಲೆ ಕೇಂದ್ರದಲ್ಲಿ ಇದುವರೆಗೂ ಒಂದೇ ಒಂದು ನೋಂದಣಿಯಾಗಿಲ್ಲ. ಹೌದು, ಕುಷ್ಟಗಿ ಎಪಿಎಂಸಿ ಗಂಜ್ ಯಾರ್ಡ್ನ ಕರ್ನಾಟಕ ರಾಜ್ಯ ಅಹಾರ, ನಾಗರಿಕ ಸರಬರಾಜು ನಿಗಮ ನಿಯಮಿತ(ಕೆ.ಎಸ್.ಎಫ್.ಸಿ) ಉಗ್ರಾಣದಲ್ಲಿ ಬೆಂಬಲ ಬೆಲೆಗೆ ನೋಂದಣಿ ಕಾರ್ಯ ಏ.20ರಿಂದ ಆರಂಭವಾಗಿದ್ದು, ಇದುವರೆಗೂ ಯಾವ ರೈತ ಕೂಡಾ ನೋಂದಣಿಗೆ ಮುಂದಾಗಿಲ್ಲ.
ಈ ಕೇಂದ್ರ ಶುರುವಾಗಿರುವ ಬಗ್ಗೆ ಇಬ್ಬರು ರೈತರು ವಿಚಾರಿಸಿಕೊಂಡು ಹೋಗಿದ್ದು ಬಿಟ್ಟರೆ, ಪುನಃ ಆಗಮಿಸಿ ಆನ್ಲೈನ್ನಲ್ಲಿ ನೋಂದಣಿ ಮಾಡಿಸಿಲ್ಲ. ವಿಚಾರಿಸಿಕೊಂಡು ಹೋಗಿದ್ದ ಹೂಲಗೇರಾ ರೈತರೊಬ್ಬರಿಗೆ ಪುನಃ ಸಂಪರ್ಕಿಸಿದರೆ ಬೆಂಬಲ ಬೆಲೆಗೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಬಲ ಬೆಲೆ ನೊಂದಣಿಗೆ ಏ.30 ಕೊನೆಯ ದಿನಾಂಕವಾಗಿದ್ದು, ಇನ್ನೆರಡು ದಿನಗಳಲ್ಲಿ ನೋಂದಣಿಯಾಗುವುದು ಅಸಾಧ್ಯವೆನಿಸಿದೆ.
ಕೇಂದ್ರ ಸರ್ಕಾರ ಘೋಷಿತ ಬೆಂಬಲ ಬೆಲೆ 2,550ರೂ. ಹೈಬ್ರೀಡ್ ಜೋಳಕ್ಕೆ, 2,570ರೂ. ಬಿಳಿ ಜೋಳಕ್ಕೆ ದರ ನಿಗದಿಯಾಗಿದೆ. ಆದರೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಮಾರುಕಟ್ಟೆ ಬೆಲೆ ಹೆಚ್ಚಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ 3,000 ರೂ. ಇದ್ದು, ಬೆಂಬಲ ಬೆಲೆಗೆ ನೀಡಿದರೆ 500 ರೂ. ಸಿಗಲಿದೆ. ಕಡಿಮೆ ಬೆಲೆ ಅಲ್ಲದೇ ತಿಂಗಳ ಬಳಿಕ, ಫ್ರುಟ್ಸ್ ತಂತ್ರಾಂಶ (ಎಫ್.ಐ.ಡಿ), ಬೆಳೆ ದರ್ಶಕ ಅ್ಯಪ್ನಲ್ಲಿ ನಮೂದಾಗಿದ್ದರೆ ಮಾತ್ರ ಖರೀದಿಗೆ ಅವಕಾಶ, ಹೀಗೆ ಇತ್ಯಾದಿ ರಗಳೆ ಕಟ್ಟಿಕೊಳ್ಳದೆ ಬಿಳಿಜೋಳ ಬೆಳೆದವರು ಸದ್ಯದ ಪರಿಸ್ಥಿಯಲ್ಲಿ ಬೆಂಬಲ ಬೆಲೆ ನೆಚ್ಚಿಕೊಂಡಿಲ್ಲ.
ಈ ಕುರಿತು ಕೆಎಸ್ಎಫ್ಸಿ ಉಗ್ರಾಣ ವ್ಯವಸ್ಥಾಪಕ ಪ್ರಕಾಶ ಮರೇಗೌಡ್ರು ಏ.30 ಕೊನೆಯ ದಿನಾಂಕವಾಗಿದ್ದರೂ ಕೂಡಾ ನೋಂದಣಿ ದಿನಾಂಕ ಮುಂದೂಡುವ ಸಾಧ್ಯತೆಗಳಿವೆ ಎಂದು ತಿಳಿಸಿದರು.