ಗಂಗಾವತಿ: ಗಂಗಾವತಿ ನಗರಸಭೆಗೆ ಕಳೆದ ಮೂರು ವರ್ಷಗಳಿಂದ ಖಾಯಂ ಪೌರಾಯಕ್ತರು ಇಲ್ಲದೆ, ಆಡಳಿತಾತ್ಮಕವಾಗಿ ನಗರಸಭೆಯ ಪ್ರಗತಿಗೆ ಸಮಸ್ಯೆಯಾಗಿದೆ.
ಗಂಗಾವತಿ ನಗರಸಭೆ ಕಲಬುರಗಿ ಪ್ರಾದೇಶಿಕ ವಿಭಾಗದಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ನಗರಸಭೆಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಗ್ರೇಡ್-1 ಕಮಿಷನರ್ ಹುದ್ದೆ ಹೊಂದಿರುವ ಇಲ್ಲಿನ ಪೌರಾಯಕ್ತ ಹುದ್ದೆಗೆ ಕಳೆದ ಮೂರು ವರ್ಷದಿಂದ ಕೇವಲ ನಿಯೋಜನೆ ಮೇರೆಗೆ ಎರಡನೇ ದರ್ಜೆ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ನಗರಸಭೆಗೆ ಕಳೆದ ಮೂರು ವರ್ಷಗಳಿಂದ ಕೆಎಂಎಎಸ್ ಶ್ರೇಣಿ ಪಡೆದ ಖಾಯಂ ಪೌರಾಯಕ್ತರು ಬಂದಿಲ್ಲ.
ಮೂರು ವರ್ಷದ ಹಿಂದೆ ಇಲ್ಲಿನ ನಗರಸಭೆಗೆ ಕಮಿಷನರ್ ಆಗಿದ್ದ ಖಾಜಾ ಮೋಹಿನುದ್ದೀನ್ ಎಂಬ ಅಧಿಕಾರಿ ನಿವೃತ್ತಿಯಾದ ಬಳಿಕ ಈವರೆಗೂ ನಾನಾ ನಗರಸಭೆ, ಪುರಸಭೆಗಳಲ್ಲಿ ಇರುವ ಕೇವಲ ಸಮುದಾಯ ಸಂಘಟನಾ ಹಂತದ ಅಧಿಕಾರಿಗಳೇ ಇಲ್ಲಿನ ಗ್ರೇಡ್-1 ಕಮಿಷನ್ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ.
ಈ ಮೊದಲು ಗದಗದ ನಗರಸಭೆಯಲ್ಲಿ ಸಮುದಾಯ ಸಂಘಟನಾ ಅಧಿಕಾರಿಯಾಗಿದ್ದ ದೇವಾನಂದ ದೊಡ್ಡಮನಿಯನ್ನು ವರ್ಗಾವಣೆ ಮಾಡಲಾಗಿತ್ತು. ಆ ಬಳಿಕ ಇಲಕಲ್ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಾಲಿ ನೌಕರ ಶೇಖರಪ್ಪ ಅವರನ್ನು, ಇದೀಗ ಅರವಿಂದ ಜಮಖಂಡಿ ಅವರನ್ನು ವರ್ಗಾವಣೆ ಮಾಡಲಾಗಿದೆ.