ಕೊಪ್ಪಳ: ಕೊರೊನಾ ಸೋಂಕಿನ ಭೀತಿ ಜನರಲ್ಲಿ ವ್ಯಾಪಕವಾಗುತ್ತಿದ್ದು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಜನರು ಮನೆ ಮದ್ದು ಹಾಗೂ ಆಯುರ್ವೇದ ಪದಾರ್ಥಗಳ ಮೊರೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟೀ-ಕಾಫಿಗೆ ಹಾಗೂ ಕಷಾಯಕ್ಕೆ ಬೇಡಿಕೆ ಹೆಚ್ಚಿದೆ.
ಹೌದು, ಕಾಯಿಲೆ ಬಂದ ಮೇಲೆ ಪರದಾಡುವುದಕ್ಕಿಂತಲೂ ಅದು ಬರದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಉತ್ತಮ. ಇದೇ ನಿಟ್ಟಿನಲ್ಲಿ ಹಲವರು ಮನೆ ಮದ್ದಿನ ಮೊರೆ ಹೋಗಿದ್ದಾರೆ. ಭಾರತದ ಆಹಾರ ಶೈಲಿಯಲ್ಲಿಯೇ ಔಷಧೀಯ ಗುಣವಿದೆ. ಹೀಗಾಗಿ ಅಡುಗೆ ಮನೆಯಲ್ಲಿಯೇ ಸಿಗುವ ಮಸಾಲೆಯ ಕೆಲ ಪದಾರ್ಥಗಳನ್ನು ಬಳಸಿ ಕಷಾಯದಂತಹ ಮನೆಮದ್ದು ತಯಾರಿಸಿಕೊಂಡು ಕುಡಿಯಲಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಮತ್ತು ಆಯುರ್ವೇದ ಪದಾರ್ಥಗಳಿಂದ ಯಾವುದೇ ರೋಗವನ್ನಾದರೂ ಸರಿ ದೂರವಿಡಬಹುದು ಎಂದು ಖುದ್ದು ವೈದ್ಯರು, ತಜ್ಞರು ಸಲಹೆ ನೀಡುತ್ತಾರೆ.
ಈ ಹಿನ್ನೆಲೆ ಕೊಪ್ಪಳದಲ್ಲಿಯೂ ವಿವಿಧ ಬಗೆಯ ಮಸಾಲೆ ಚಹಾಗಳಿಗೆ ಬೇಡಿಕೆ ಹೆಚ್ಚಿದೆ. ನಗರದಲ್ಲಿರುವ ಬೆರಳೆಣಿಕೆಯಷ್ಟು ಅಂಗಡಿಗಳಲ್ಲಿ ಮಾತ್ರ ಗ್ರೀನ್ ಟೀ, ಲೆಮನ್ ಟೀ, ಜಿಂಜರ್ ಟೀ, ಮಸಾಲಾ ಟೀ ಹಾಗೂ ಕಷಾಯ ಸಿಗುತ್ತಿದ್ದು, ಜನ ಇದನ್ನು ಸೇವಿಸಲು ಮುಗಿಬೀಳುತ್ತಿದ್ದಾರೆ. ಈ ಹಿಂದೆ ಸಾಮಾನ್ಯ ಚಹಾಗೆ ತಕ್ಕಮಟ್ಟಿಗೆ ಬೇಡಿಕೆ ಇತ್ತು. ಆದರೆ, ಕಳೆದ ಮೂರ್ನಾಲ್ಕು ತಿಂಗಳಿಂದ ಕೊರೊನಾ ಸೋಂಕಿನ ಭೀತಿಯಿಂದಾಗಿ ಮಸಾಲಾ ಟೀ ಹಾಗೂ ಜಿಂಜರ್ ಟೀ ಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಟೀ ಹೌಸ್ ಮಾಲೀಕ ಮಹೇಶ್ ಕಂದಗಲ್.