ಗಂಗಾವತಿ: ಮಾದಕ ವಸ್ತು ಮಾರಾಟ ಮಾಡುವುದು ಮತ್ತು ಅದನ್ನು ಬಳಕೆ ಮಾಡುವುದು ಎರಡೂ ಕಾನೂನು ಬಾಹಿರ ಕೃತ್ಯವಾಗಿದ್ದು, ಇದರಿಂದ ಯುವ ಜನಾಂಗದ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಉಂಟಾಗುತ್ತದೆ ಎಂದು ಗ್ರಾಮೀಣ ಪಿಎಸ್ಐ ದೊಡ್ಡಪ್ಪ ಹೇಳಿದರು.
ಪೊಲೀಸ್ ಇಲಾಖೆಯಿಂದ ತಾಲೂಕಿನ ಸಣಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ನಿಯಂತ್ರಣದ ಬಗ್ಗೆ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಈ ಮಾದಕ ವಸ್ತುವಿನ ವಿಷಯ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಕಠಿಣ ಕಾನೂನುಗಳು ಅನ್ವಯವಾಗಲಿವೆ. ಈಗಾಗಲೇ ಈ ಭಾಗ ಪ್ರವಾಸಿ ತಾಣವಾಗಿದ್ದ ಹಿನ್ನೆಲೆ ಸಾಕಷ್ಟು ಮಾದಕ ವಸ್ತುಗಳ ಮಾರಾಟ ನಡೆಯುತ್ತಿತ್ತು. ವಿರುಪಾಪುರ ಗಡ್ಡೆ ತೆರವಾದ ಬಳಿಕ ಮಾದಕ ವಸ್ತುಗಳ ಸರಬರಾಜು ಕೊಂಚ ಮಟ್ಟಿಗೆ ತಗ್ಗಿದೆ ಎಂದರು.
ಈ ಮೊದಲು ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ದಾಖಲಿಸುತ್ತಿದ್ದ ಪ್ರಕರಣದ ಜೊತೆಗೆ ಈಗ ಮತ್ತೆ ಕಳ್ಳತನ ಕೇಸ್ ಹಾಕಲಾಗುವುದು. ಈ ಹಿನ್ನೆಲೆ ಮಾದಕ ವಸ್ತುಗಳ ಮಾರಾಟ ಅಥವಾ ಸೇವನೆಯಂತ ದುಶ್ಚಟಕ್ಕೆ ಮುಂದಾಗಬಾರದು ಎಂದು ಪಿಎಸ್ಐ ದೊಡ್ಡಪ್ಪ ಹೇಳಿದರು.