ಕೊಪ್ಪಳ : ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದವರು ಬಿಜೆಪಿಯವರ ಜೊತೆ ಗುರುತಿಸಿಕೊಂಡರು. ಹೀಗಾಗಿ ಅವರ ವಿರುದ್ಧ ಅವಿಶ್ವಾಸ ಮಂಡಿಸಿ ಗೆದ್ದಿದ್ದೆವು. ಪಕ್ಷ ಬಿಟ್ಟು ಹೋಗಿದ್ದಕ್ಕೆ ಏನಾಯಿತು ಎಂದು ಅವರಿಗೆ ಈಗ ಗೊತ್ತಾಗಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರ ಆಯ್ಕೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಗೈರಾಗಿರುವ ನಮ್ಮ ಸದಸ್ಯರ ಮೇಲೆ ಪಕ್ಷ ಕ್ರಮ ಕೈಗೊಳ್ಳುತ್ತದೆ. ಅವರಿಗೆ ನೋಟಿಸ್ ನೀಡಲಾಗುತ್ತದೆ ಎಂದರು.
ಬಿಜೆಪಿಯ 6, ಓರ್ವ ಪಕ್ಷೇತರ ಸದಸ್ಯರು ಇಂದು ನಮ್ಮನ್ನು ಬೆಂಬಲಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಉಳಿಯಬೇಕು, ಅಭಿವೃದ್ಧಿ ಕೆಲಸಗಳಾಗಬೇಕು ಎಂಬ ಉದ್ದೇಶದಿಂದ ಇಂದು ಅವರು ನಮ್ಮನ್ನು ಬೆಂಬಲಿಸಿದ್ದಾರೆ. ಹಿಟ್ನಾಳ್ ಕುಟುಂಬದರು ಅಧ್ಯಕ್ಷರಾದರು ಎಂಬುದಕ್ಕಿಂತ ಎಲ್ಲರ ಒಮ್ಮತದೊಂದಿಗೆ ಕೆ. ರಾಜಶೇಖರ್ ಹಿಟ್ನಾಳ್ ಅವರು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಹಿಂದೆ ಅವರು ಅಧ್ಯಕ್ಷರಾಗಿದ್ದಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದರು. ಹೀಗಾಗಿ ಸದಸ್ಯರು ಒಮ್ಮತದಿಂದ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.