ಕೊಪ್ಪಳ: ಹೆತ್ತ ತಾಯಿಯೇ ತನ್ನ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಆರೋಪ ಪ್ರಕರಣ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ.
ಸೋಮನಾಳ ಗ್ರಾಮದ ಪ್ರತಿಮಾ ಎಂಬ ಮಹಿಳೆ ತನ್ನ 16 ತಿಂಗಳ ಮಗ ಅಭಿನವನನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆ ಈ ಕೃತ್ಯವೆಸಗಿದ್ದಾಳೆ ಎಂದು ಮಗುವಿನ ತಂದೆ ಶಶಿಧರ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ದೂರು ಆಧರಿಸಿ ಆರೋಪಿ ಪ್ರತಿಮಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಗುವಿನ ತಂದೆ ಶಶಿಧರ ನೀಡಿರುವ ದೂರಿನ ವಿವರ: ನಾನು, ಪತ್ನಿ ಪ್ರತಿಮಾ ಹಾಗೂ ಮಗ ಅಭಿನವ್ ಸೋಮನಾಳದ ನಮ್ಮ ಮನೆಯ ಮೇಲ್ಮಹಡಿಯಲ್ಲಿ ವಾಸವಾಗಿದ್ದೆವು. ನಾನು ಕಳೆದ ಐದಾರು ತಿಂಗಳು ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದೆ. ಇದರಿಂದಾಗಿ ನನ್ನ ಪತ್ನಿ ಪ್ರತಿಮಾ ನೀನು ದುಡಿಯದೆ ಇದ್ದರೆ ನಮ್ಮ ಬದುಕು ಹಾಗೂ ಮಗುವಿನ ಭವಿಷ್ಯದ ಗತಿಏನು? ಹೀಗೆ ಕೆಲಸವಿಲ್ಲದೆ ಇದ್ರೆ ನನ್ನ ಮಗನನ್ನು ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಳು. ಕಾರಟಗಿಯ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಕೇಳಿಕೊಂಡು ಬಂದಿದ್ದೆ. ಅವರು ಕೆಲಸಕ್ಕೆ ಬಾ ಎಂದು ಹೇಳಿದ್ದರು. ಮರುದಿನ ನನ್ನ ಪತ್ನಿಗೆ ತಿಳಿಸದಂತೆ ನಾನು ಕೆಲಸಕ್ಕೆ ಹೋಗಿದ್ದೆ. ಪತ್ನಿ ಬಾಗಿಲು ತೆಗೆಯದಿರುವ ಬಗ್ಗೆ ನನಗೆ ನನ್ನ ತಾಯಿ ಫೋನ್ ಮಾಡಿ ಹೇಳಿದರು. ಆಗ ನಾನು ಮನೆಗೆ ಬಂದು ಬಾಗಿಲು ತೆಗೆದು ನೋಡಿದಾಗ ನನ್ನ ಪತ್ನಿಯು ಮಗ ಅಭಿನವ್ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಹೇಳಿದಳು. ಆಗ ನಾನು ಮನೆಯವರೊಂದಿಗೆ ಚರ್ಚಿಸಿ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಶಶಿಧರ್ ದೂರಿನನಲ್ಲಿ ಉಲ್ಲೇಖಿಸಿದ್ದಾನೆ.