ಕುಷ್ಟಗಿ (ಕೊಪ್ಪಳ): ಗೋ ಹತ್ಯೆ ಹಾಗೂ ಅಕ್ರಮ ಗೋ ಸಾಗಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಆದರೆ, ಗೋವುಗಳ ಪಾಲನೆ, ಪೋಷಣೆ ಮಾಡುವ ಗೋ ಸಂರಕ್ಷಕರ ಬಗ್ಗೆ ಸರ್ಕಾರದ ಕ್ರಮ ಏನು? ಎಂಬುದು ಪ್ರಶ್ನಾರ್ಥಕವಾಗಿದೆ.
ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ನಿರ್ವಹಣೆ ಸಾಧ್ಯವಾಗದೇ ಯಾಂತ್ರೀಕರಣದ ಮೊರೆ ಹೋಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಜಾನುವಾರು ಸಾಕಣೆ ಕಡಿಮೆಯಾಗಿದ್ದು, ಜಾನುವಾರು ಮಾರಾಟ ಮಾಡಿ ಪರ್ಯಾಯ ಉದ್ಯೋಗದಲ್ಲಿ ನಿರತರಾಗಿರುವುದು ಕಂಡು ಬಂದಿದೆ.
ಇನ್ನು ತಾವು ಸಾಕಿದ ಜಾನುವಾರು, ಕುರಿಗಳೊಂದಿಗೆ ಊರಿಂದ ಊರಿಗೆ ಸಂಚರಿಸುವ ಗೊಲ್ಲ ಸಮುದಾಯ ಈಗಲೂ ಕೂಡ ಹೊಲಗಳಲ್ಲಿ ತಮ್ಮ ಕುರಿ - ಗೋವುಗಳನ್ನು ತರುಬಿಕೊಂಡು ಜೀವನ ಕಳೆಯುತ್ತಿದ್ದಾರೆ. ತಮ್ಮ ದೇಶಿ ಗೋವುಗಳ ರಕ್ಷಣೆಯಲ್ಲಿ ಸಕ್ರೀಯರಾಗಿದ್ದಾರೆ. ವಿಪರ್ಯಾಸ ಎಂದರೆ, ಈ ಜನರಿಗೆ ಗೋಹತ್ಯೆ ನಿಷೇಧ ಏನೆಂಬುದೇ ಗೊತ್ತಿಲ್ಲ.
ಕುಷ್ಟಗಿಯ ಮಲೀಯಪ್ಪ ಗೊಲ್ಲರ್ ಅವರ ಬಳಿ ನೂರು ದೇಶಿ ದನಗಳಿದ್ದು, ವಂಶ ಪರಂಪರೆಯಾಗಿ ಗೋ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಂದಿಗೂ ನಾವು ಗೋವುಗಳನ್ನು ಮಾರಾಟ ಮಾಡುವುದಿಲ್ಲ. ಎಷ್ಟೇ ಸಂಕಷ್ಟಗಳು ಎದುರಾದರೂ ಸಂಪ್ರದಾಯ ಕೈ ಬಿಟ್ಟಿಲ್ಲ. ಶ್ರೀ ಕೃಷ್ಣನ ಆರಾಧಕರಾದ ಈ ಸಮುದಾಯ ಹಾಲು ಪುಟ್ಟಿ (ಹಾಲಡಿಗೆ ಪುಟ್ಟಿ), ಜಿನಿಗಿ ಪದ್ದತಿ, ಮಜ್ಜಿಗಿ ಮರಿ ಪದ್ಧತಿಯನ್ನು ಈಗಲೂ ಚಾಚು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ. ಮಳೆ, ಬಿಸಿಲು, ಚಳಿ ಎನ್ನದೇ ಎಲ್ಲ ಋತುಮಾನಗಳಲ್ಲಿ ಅಲೆಮಾರಿಗಳಾಗಿರುವ ಈ ಗೋ ಪಾಲಕರಿಗೆ ಸರ್ಕಾರ ಪ್ರಸಕ್ತ ಬಜೆಟ್ನಲ್ಲಿ ಅಗತ್ಯ ನೆರವು ನೀಡಲು ಮುಂದಾಗಬೇಕಿದೆ.
ಇನ್ನು ಸರ್ಕಾರ ಗೋಹತ್ಯೆ ನಿಷೇಧಿಸಿದರಷ್ಟೇ ಸಾಲದು, ಗೋವುಗಳ ಸಂರಕ್ಷಣೆಯಲ್ಲಿ ತೊಡಗುವ ಗೊಲ್ಲ ಸಮುದಾಯದವರಿಗೆ ಪ್ರಸಕ್ತ ಬಜೆಟ್ನಲ್ಲಿ ನ್ಯಾಯ ಕಲ್ಪಿಸಬೇಕು ಎಂದು ಗೊಲ್ಲ ಸಮಾಜದ ಹೋರಾಟಗಾರ ಮೇಘರಾಜ್ ಗೊಲ್ಲರ್ ಒತ್ತಾಯಿಸಿದ್ದಾರೆ.