ಗಂಗಾವತಿ : ಕಾಂಗ್ರೆಸ್ ಪಕ್ಷದ ಕಾರಟಗಿ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷರ ಮೇಲೆ ಬಿಜೆಪಿ ಮುಖಂಡನೊಬ್ಬ ಟ್ರ್ಯಾಕ್ಟರ್ ಹತ್ತಿಸಿ ಕೊಲೆಗೆ ಯತ್ನಿಸಿದ ಘಟನೆ ತಾಲೂಕಿನ ಜಂಗಮ ಕಲ್ಗುಡಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ತೀವ್ರಗಾಯಗೊಂಡ ವಿ.ಪ್ರಸಾದ್ ಎಂಬುವರನ್ನು ಇಲ್ಲಿನ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ಗ್ರಾಮದ ಬಿಜೆಪಿ ಮುಖಂಡ ಮುರಳಿಕೃಷ್ಣ ಎಂಬುವ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಗ್ರಾಮದಲ್ಲಿ ಕಾಮಗಾರಿ ನಿರ್ವಹಿಸುವ ಸಂಬಂಧ ಪರಸ್ಪರ ಚಕಮಕಿ ನಡೆದು ಈ ಘಟನೆ ನಡೆದಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಗ್ರಾಮದಲ್ಲಿ ಕಾಮಗಾರಿ ನಿರ್ವಹಿಸುವ ಸಂಬಂಧ ಪರಸ್ಪರ ಮಾತಿನ ಚಕಮಕಿ ನಡೆದಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಆದರೆ, ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಗ್ರಾಮೀಣ ಠಾಣೆ ಎದುರು ಪ್ರತಿಭಟನೆ : ಕಾಂಗ್ರೆಸ್ ಮುಖಂಡನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆಗೆ ಯತ್ನಿಸಿದ ಬಿಜೆಪಿ ಮುಖಂಡನ ಬಂಧನಕ್ಕೆ ಒತ್ತಾಯಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಶಿವರಾಜ ತಂಗಡಗಿ ಹಾಗೂ ಮಾಜಿ ಸಂಸದ ಶಿವರಾಮಗೌಡ ಗ್ರಾಮೀಣ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಜಂಗಮರ ಕಲ್ಗುಡಿ ಗ್ರಾಮದ ಕಾಂಗ್ರೆಸ್ ಮುಖಂಡ ಪ್ರಸಾದ್ ಮೇಲೆ ಬೆಳಗ್ಗೆ ಕೊಲೆಗೆ ಯತ್ನ ನಡೆದಿದೆ. ಆದರೆ, ಪೊಲೀಸರು ಇದುವರೆಗೂ ದೂರು ದಾಖಲಿಸಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಠಾಣೆಯ ಆವರಣದಲ್ಲಿ ಧರಣಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಆವರಣದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಬಳಿಕ ಮಧ್ಯೆ ಪ್ರವೇಶಿಸಿದ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವೆಂಕಟಸ್ವಾಮಿ ದೂರು ದಾಖಲಿಸಿಕೊಳ್ಳಲು ಸೂಚಿಸಿದರು.