ಗಂಗಾವತಿ: ಕುಟುಂಬದಿಂದ ದೂರವಿದ್ದು ಮಕ್ಕಳ, ಪಾಲಕರ ಪಾಲನೆ ಮಾಡದೇ ಸಮಸ್ಯೆಯಲ್ಲಿದ್ದೇವೆ. ನಮ್ಮನ್ನು ದಯವಿಟ್ಟು ವರ್ಗಾವಣೆ ಮಾಡಿ ನಮ್ಮ ಜಿಲ್ಲೆಗೆ ಕಳುಹಿಸಿಬಿಡಿ ಎಂದು ನೂರಾರು ಶಿಕ್ಷಕಿಯರು ಶಾಸಕ ಪರಣ್ಣ ಮುನವಳ್ಳಿ ಎದುರು ಕಣ್ಣೀರಿಟ್ಟಿದ್ದಾರೆ.
ಕಳೆದ ಇಪ್ಪತ್ತು ವರ್ಷದಿಂದ ನಾವು ಕೊಪ್ಪಳ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಈಗಾಗಲೇ ಈ ಭಾಗದಲ್ಲಿನ ವಿಶೇಷ ನೇಮಕಾತಿ ಮೂಲಕ ಬಹುತೇಕ ಶಿಕ್ಷಕರ ಹುದ್ದೆಗಳು ಭರ್ತಿಯಾಗಿವೆ. ವೆಕೆನ್ಸಿ ಭರ್ತಿಯಾದರೂ ನಮ್ಮನ್ನು ನಮ್ಮ ಜಿಲ್ಲೆಗೆ ಕಳುಹಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕಳೆದ 25 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇವೆ. ಕಲ್ಯಾನ ಕರ್ನಾಟಕ ಭಾಗದವರನ್ನು ನೇಮಕಾತಿ ಮಾಡಿಕೊಂಡು ದಯವಿಟ್ಟು ನಮಗೂ ನಮ್ಮ ಕುಟುಂಬದವರೊಂದಿಗೆ ವಾಸಿಸಲು ಅವಕಾಶ ಮಾಡಿಕೊಡಿ. ಜೀವನ ಪೂರ್ತಿ ಇಲ್ಲಿ ಕಳೆಯಬೇಕು ಎಂಬುವುದು ಯಾವ ನ್ಯಾಯ? ನಮಗೂ ವಯಸ್ಸಾದ ತಂದೆ-ತಾಯಂದಿರು ಇದ್ದಾರೆ. ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ ಎಂದು ಗೋಗರೆದಿದ್ದಾರೆ.
ಸಮಸ್ಯೆ ಆಲಿಸಿದ ಶಾಸಕ ಪರಣ್ಣ ಮುನವಳ್ಳಿ, ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಯತ್ನಿಸುವುದಾಗಿ ಭರವಸೆ ನೀಡಿದರು.