ಗಂಗಾವತಿ: ನಾನಾ ವಲಯದಲ್ಲಿನ ಕೆಲಸಗಾರರು, ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಸವಲತ್ತು ನೀಡಿದಂತೆ, ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಅರೆಕಾಲಿಕ ಶಿಕ್ಷಕರಿಗೆ ಸರ್ಕಾರದಿಂದ ವಿಶೇಷ ಪ್ರೋತ್ಸಾಹ ಧನ ಅಥವಾ ಸೌಲಭ್ಯ ನೀಡಬೇಕು ಎಂದು ಖಾಸಗಿ ಶಿಕ್ಷಕರು ಒತ್ತಾಯಿಸಿದ್ದಾರೆ.
ಸಿದ್ದಿಕೇರಿ ರಸ್ತೆಯಲ್ಲಿರುವ ಜಯನಗರದ ಸೆಂಟ್ ಫಾಲ್ಸ್ ಶಾಲೆಯಲ್ಲಿನ ಸುಮಾರು 30ಕ್ಕೂ ಹೆಚ್ಚು ಶಿಕ್ಷಕರು, ಕೈಗೆಕಪ್ಪು ಪಟ್ಟಿ ಕಟ್ಟಿಕೊಂಡು ಶಿಕ್ಷಕರ ದಿನಾಚರಣೆ ಆಚರಿಸುವ ಮೂಲಕ ಸರ್ಕಾರದ ವಿರುದ್ಧ ಪರೋಕ್ಷವಾಗಿ ಅಸಮಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಶಿಕ್ಷಕ ಲಕ್ಷ್ಮಣ, ಲಾಕ್ಡೌನ್ ಬಳಿಕ ನಮ್ಮ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಖಾಸಗಿ ಶಾಲೆಗಳಲ್ಲಿ ಮೂರರಿಂದ ಆರು ಸಾವಿರ ರೂಪಾಯಿ ವೇತನಕ್ಕೆ ಕೆಲಸ ಮಾಡುತ್ತಿದ್ದೇವು. ಆದರೆ ಲಾಕ್ಡೌನ್ ಬಳಿಕ ಶಾಲೆಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ದೆಹಲಿ ಮಾದರಿಯಲ್ಲಿ ನಮಗೂ ಪ್ಯಾಕೇಜ್ ಕೊಡಿ ಎಂದು ಆಗ್ರಹಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ವೇತನವಿಲ್ಲ. ಮನೆ ನಿರ್ವಹಿಸುವುದು ಕಷ್ಟವಾಗಿದೆ. ಮಕ್ಕಳ ಶಾಲಾ-ಕಾಲೇಜು ಶುಲ್ಕ, ಮನೆ ನಿರ್ವಹಣೆ ಅತ್ಯಂತ ಕಷ್ಟಕರವಾಗಿದೆ ಎಂದು ಕೆಲ ಶಿಕ್ಷಕರು ಈ ಸಂದರ್ಭದಲ್ಲಿ ತಮ್ಮ ಅಳಲು ತೋಡಿಕೊಂಡರು.