ಗಂಗಾವತಿ : ತಾಲೂಕಿನ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಕ್ಕೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಡಿ ಮೋಹನ್ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ನಾಲ್ಕು ತಿಂಗಳಿಂದ ವಿದ್ಯಾರ್ಥಿಗಳಿಲ್ಲದೆ ವಸತಿ ನಿಲಯಗಳು ಖಾಲಿ ಇವೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಯಾವುದೇ ಸಂದರ್ಭದಲ್ಲಿ ಆರಂಭವಾಗುವ ಲಕ್ಷಣವನ್ನು ಶಿಕ್ಷಣ ಇಲಾಖೆ ನೀಡಿದ್ದು, ಈ ಹಿನ್ನೆಲೆಯಲ್ಲಿ ವಸತಿ ನಿಲಯದಲ್ಲಿನ ಅಗತ್ಯತೆಗಳ ಬಗ್ಗೆ ಪರಿಶೀಲಿಸಿದರು.
ಜೆಸ್ಕಾಂ ಇಲಾಖೆಯ ಅಧಿಕಾರಿಗಳ ಮೂಲಕ ಭೇಟಿ ನೀಡಿದ ಇಒ, ವಸತಿ ನಿಲಯಗಳಲ್ಲಿನ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಪಟ್ಟಿ ಮಾಡಿ ದುರಸ್ಥಿ ಕೈಗೊಳ್ಳುವಂತೆ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮೋಹನ್ ಸೂಚನೆ ನೀಡಿದರು.
ವಸತಿ ನಿಲಯದಲ್ಲಿನ ಮಕ್ಕಳ ಸ್ನಾನಕ್ಕೆಂದು ಅಳವಡಿಸಿರುವ ಸೋಲಾರ್, ಕುಡಿಯುವ ಮತ್ತು ಬಳಕೆ ನೀರಿನ ಮೋಟರ್, ಕೈಪಂಪು, ಶೌಚಾಲಯ, ಸ್ನಾನದ ಕೋಣೆ, ಅಡುಗೆ ಮನೆ, ವಿಶ್ರಾಂತಿ ಕೋಣೆ, ಮಲಗುವ ಕೊಠಡಿ, ಊಟದ ಸ್ಥಳಗಳಲ್ಲಿನ ವಿದ್ಯುತ್ ಸಮಸ್ಯೆ ಈ ಸಂದರ್ಭದಲ್ಲಿ ಪರಿಶೀಲಿಸಲಾಯಿತು.