ಗಂಗಾವತಿ: ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಬಗ್ಗೆ ಕರಪತ್ರ ಹಂಚಲು ಮುಂದಾದ ಬಿಜೆಪಿ ನಾಯಕರ ಮೇಲೆ ಹಲ್ಲೆಗೆ ಯತ್ನಿಸಿದ್ದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪೊಲೀಸರಿಗೆ ಸೂಚಿಸಿದ್ದಾರೆ.
ರಾಯಚೂರಿಗೆ ತೆರಳುವ ಮಾರ್ಗ ಮಧ್ಯೆ ಶಾಸಕ ಪರಣ್ಣ ಮುನವಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸಂಸತ್ತಿನಲ್ಲಿ ನಿರ್ಣಯ ಅಂಗೀಕಾರವಾಗಿ ಅನುಷ್ಠಾನಕ್ಕೆ ಬಂದಿದೆ. ಈ ಬಗ್ಗೆ ಬಿಜೆಪಿ ಅಧಿಕೃತ ಕರಪತ್ರ ಹಂಚುವ ಕೆಲಸ ಮಾಡುತ್ತಿದೆ. ಇದಕ್ಕೆ ಯಾರೇ ವಿರೋಧ ವ್ಯಕ್ತಪಡಿಸುವ ಅಥವಾ ತಡೆಯಲು ಮುಂದಾದರೆ ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಪೊಲೀಸರು ಯಾರನ್ನೂ ಒಲೈಸುವ ಅಗತ್ಯವಿಲ್ಲ ಎಂದರು.