ಗಂಗಾವತಿ: ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಹಾಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ನಾರಾ ಸೂರ್ಯನಾರಾಯಣ ರೆಡ್ಡಿ ಆನೆಗೊಂದಿಯ ದುರ್ಗಾ ಬೆಟ್ಟಕ್ಕೆ ದಿಢೀರ್ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಆನೆಗೊಂದಿಯ ವಾಲಿಕಿಲ್ಲಾದ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಸೂರ್ಯನಾರಾಯಣ ರೆಡ್ಡಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅಲ್ಲಿನ ಗೋಶಾಲೆಗೆ ಭೇಟಿ ನೀಡಿ ಗೋಶಾಲೆಗೆ ಮಾಸಿಕ ಐವತ್ತು ಸಾವಿರ ರೂಪಾಯಿ ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಈಗಾಗಲೇ ದುರ್ಗಾ ಬೆಟ್ಟಕ್ಕೆ ಕೇವಲ ಕೂಗಳತೆಯ ದೂರದಲ್ಲಿರುವ ಪಂಪಾಸರೋವರದ ಲಕ್ಷ್ಮಿ ದೇಗುಲದ ಜೀರ್ಣೋದ್ಧಾರ ಕೈಗೊಂಡಿರುವ ಸಾರಿಗೆ ಸಚಿವ ಶ್ರೀರಾಮುಲು ಇದೀಗ ನಿರಂತರವಾಗಿ ಗಂಗಾವತಿಯೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ.

ಅಲ್ಲದೇ, ಗಂಗಾವತಿಯ ಕೆಲ ಸೆಕೆಂಡ್ ಮತ್ತು ಥರ್ಡ್ಲೈನ್ ಕಾಂಗ್ರೆಸ್ ನಾಯಕರೊಂದಿಗೆ ಸೂರ್ಯನಾರಾಯಣ ರೆಡ್ಡಿ ಗೌಪ್ಯ ಸಭೆಗಳನ್ನ ಈಗಾಗಲೆ ನಡೆಸಿದ್ದಾರೆ. ಭವಿಷ್ಯತ್ತಿನ ಗಂಗಾವತಿ ಕ್ಷೇತ್ರದತ್ತ ದೃಷ್ಟಿ ಹಾಯಿಸುವ ಉದ್ದೇಶ ರೆಡ್ಡಿಗೆ ಇದೆ ಎಂದು ಹೇಳಲಾಗುತ್ತಿದೆ.
ಇದರ ಮಧ್ಯೆ ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸೂರ್ಯನಾರಾಯಣ ರೆಡ್ಡಿ ನಿರಂತರ ಗಂಗಾವತಿಗೆ ಭೇಟಿ ನೀಡುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಗಣಿ ಜಿಲ್ಲೆ ಬಳ್ಳಾರಿಯ ರಾಜಕೀಯ ಘಮುಲು ನಿಧಾನವಾಗಿ ಭತ್ತದ ಕಣಜದತ್ತ ವಾಲುತ್ತಿದೆಯಾ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.