ಕುಷ್ಟಗಿ: ತಾಲೂಕಿಗೆ ಸಮರ್ಪಕವಾಗಿ ಯುರಿಯಾ ಗೊಬ್ಬರ ಪೂರೈಸುವಂತೆ ಆಗ್ರಹಿಸಿ ನವ ಕರ್ನಾಟಕ ಸೈನ್ಯ ಸಂಘಟನೆ ನೇತೃತ್ವದಲ್ಲಿ ಕಾರ್ಯಕರ್ತರು, ಗ್ರೇಡ್-2 ತಹಶೀಲ್ದಾರ್ ವಿಜಯಾ ಮುಂಡರಗಿ ಅವರ ಮೂಲಕ ಕೃಷಿ ಸಚಿವ ಬಿ ಸಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಏಕಕಾಲಕ್ಕೆ ಯುರಿಯಾ ಗೊಬ್ಬರ ಬೇಡಿಕೆ ಹೆಚ್ಚಾಗಿದ್ದು, ತಾಲೂಕಿನ ಎಲ್ಲ ಹೋಬಳಿಗಳಿಗೆ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಸಿ, ಕೃತಕ ಅಭಾವ ಸೃಷ್ಟಿಸದಂತೆ ಎಚ್ಚರ ವಹಿಸಬೇಕು. ಮೇಲ್ನೋಟಕ್ಕೆ ದಾಸ್ತಾನಿದೆ, ಕೊರತೆಯಾಗುವುದಿಲ್ಲ ಎಂಬ ಹೇಳಿಕೆಗಳ ಬದಲಿಗೆ ಕೃಷಿ ಸಚಿವ ಬಿ.ಸಿ. ಪಾಟೀಲರು ಗೊಬ್ಬರ ಮಾರಾಟ ಅಂಗಡಿಗಳಲ್ಲಿ ದಾಸ್ತಾನು, ಮಾರಾಟದ ವಾಸ್ತವ ಸ್ಥಿತಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಬೆಳೆ ವಿಮಾ ಯೋಜನೆಯಲ್ಲಿ ಬೆಳೆ ಪರಿಹಾರಕ್ಕಾಗಿ ಶೀಘ್ರವೇ ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಜಿಲ್ಲಾಧ್ಯಕ್ಷ ಸಂಗಮೇಶ, ತಾಲೂಕು ಅಧ್ಯಕ್ಷ ಶರಣಪ್ಪ ಮಾಲಗತ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.