ಕೊಪ್ಪಳ: ತನ್ನ ಅಪಾರ ಬುದ್ದಿ ಹಾಗೂ ನೆನಪಿನ ಶಕ್ತಿಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಮೂರು ವರ್ಷದ ಪೋರನಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ಸೂಪರ್ ಮೆಮೊರಿ ಕಿಡ್ ಎಂದು ಘೋಷಣೆ ಮಾಡಿ ಪ್ರಶಸ್ತಿ ಹಾಗೂ ಮೆಡಲ್ ನೀಡಿ ಗೌರವಿಸಿದೆ.
ಜಿಲ್ಲೆಯ ಕಾರಟಗಿ ಪಟ್ಟಣದ ರೋಹಿತ್ ಎಂಬ ಮೂರು ವರ್ಷದ ಪೋರನನ್ನು ಗುರುತಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಸೂಪರ್ ಮೆಮೊರಿ ಕಿಡ್ ಆಫ್ 2019 ಎಂದು ಸ್ಥಾನ ನೀಡಿದೆ. ಜಿಲ್ಲೆಯ ಕರಟಗಿ ಪಟ್ಟಣದ ನಿವಾಸಿ ಲಿಂಗರಾಜ್ ಅಲಿಯಾಸ್ ಜಾನಿಮೂನ್ ಎಂಬುವರು ತಮ್ಮ ಮಗ ರೋಹಿತ್‍ನ ಒಂದು ವಿಡಿಯೋವನ್ನು ಕಳೆದ ಒಂದು ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ ಫೇಸ್‍ಬುಕ್ ಪೇಜ್‍ಗಳಲ್ಲಿ ಮಿಲಿಯನ್‍ಗಟ್ಟಲೆ ಲೈಕ್ಸ್, ವೀವ್ಸ್, ಶೇರ್‍ಗಳನ್ನು ಕಂಡಿತ್ತು. ಆಗ ಎರಡು ವರ್ಷದ ಮಗುವಾಗಿದ್ದ ರೋಹಿತ್‍ನ ಬುದ್ದಿಶಕ್ತಿ ಮತ್ತು ನೆನಪಿನ ಶಕ್ತಿಯನ್ನು ಪರಿಚಯಿಸುವ ವಿಡಿಯೋ ಅದಾಗಿತ್ತು.
ಫಟಾಫಟ್ ಅಂತಾ ಎಲ್ಲದಕ್ಕು ಉತ್ತರಿಸುವ ಆ ಮಗುವನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಫಿದಾ ಆಗಿದ್ದರು. ವೈರಲ್ ಆಗಿದ್ದ ಆ ವಿಡಿಯೋವನ್ನು ಹರಿಯಾಣದ ಫರಿದಾಬಾದ್ ಮೂಲದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಎಂಬ ಸಂಸ್ಥೆ ಗಮನಿಸಿತ್ತು. ಮಗುವಿನ ಅದ್ಭುತ ಮೆಮೊರಿ ಹಾಗೂ ಪ್ರತಿಭೆಯನ್ನು ಗುರುತಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ 'ಸೂಪರ್ ಮೆಮೊರಿ ಕಿಡ್' ಎಂಬ ಬಿರುದು ನೀಡಿ ಸನ್ಮಾನಿಸಿದೆ.