ಗಂಗಾವತಿ: ಪ್ಲೀಸ್ ನಮ್ಮನ್ನು ಬಿಟ್ಟು ಹೋಗ್ಬೇಡಿ, ನಿಮ್ಮನ್ನ ನಾವು ಬಿಟ್ಟಿರಲ್ಲ. ದಯವಿಟ್ಟು ನಮ್ಮನ್ನು ಬಿಟ್ಟು ಹೋಗ್ಬೇಡಿ... ಹೀಗೆ ಮಕ್ಕಳು ಕಣ್ಣೀರಿಡುತ್ತಿದ್ದರೆ, ನೆರೆದವರ ಕಣ್ಣಾಲೆಗಳು ಒದ್ದೆಯಾಗುತ್ತಿತ್ತು. ಇಷ್ಟಕ್ಕೂ ಮಕ್ಕಳ ಈ ರೋಧನೆಗೆ ಕಾರಣ ಏನು ಅಂದ್ರೆ ನಿಮ್ಮ ಕಣ್ಣುಗಳೇ ಒಮ್ಮೆ ಒದ್ದೆ ಆಗದೇ ಇರದು.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ವಿರೂಪಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ರಜಿನಿ ಅವರ ವರ್ಗಾವಣೆ ಆಗಿದ್ದಾರೆ. ಈ ವಿಷಯ ಕೇಳಿದ ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕಿ ರಜಿನಿ ಅವರನ್ನು ಅಪ್ಪಿಕೊಂಡು ಕಣ್ಣಿರಿಟ್ಟಿದ್ದಾರೆ. ಶಿಕ್ಷಕಿ ರಜಿನಿ ಅವರನ್ನು ಮರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಮಾಡಿ ಇತ್ತೀಚೆಗೆ ಆದೇಶ ಹೊರಡಿಸಲಾಗಿದೆ.
ಕಳೆದ ಎಂಟು ವರ್ಷದಿಂದ ವಿರೂಪಾಪುರದಲ್ಲಿ ಶಿಕ್ಷಕಿಯಾಗಿದ್ದ ರಜಿನಿ ಅವರು, ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿ. ಮಕ್ಕಳೊಂದಿಗೆ ಬೆರೆತು ಆಟ, ಪಾಠ ಮಾಡುತ್ತಿದ್ದ ಮಾದರಿ ಸ್ವತಃ ಪಾಲಕರ ಮನಸ್ಸು ಗೆದ್ದಿದ್ದರು. ಇದು ಶಿಕ್ಷಕಿ ಮತ್ತು ಮಕ್ಕಳ ನಡುವೆ ಅವಿನಾಭಾವ ಸಂಬಂಧ ಬೆಸೆದಿತ್ತು. ಹೀಗಾಗಿ ಶಿಕ್ಷಕಿ ರಜಿನಿ ಅವರ ವರ್ಗಾವಣೆಯನ್ನು ವಿರೋಧಿಸಿ ಮಕ್ಕಳು ರೋಧಿಸುತ್ತಿದ್ದರು.
ಶಿಕ್ಷಕರೊಬ್ಬರ ವರ್ಗಾವಣೆಗೆ ಮಕ್ಕಳ ಮುಗ್ದ ಮನಸ್ಸನ್ನು ತಟ್ಟುತ್ತಿರುವುದು ಮನಮಿಡಿಯುವಂತಿದೆ.