ಗಂಗಾವತಿ: ತಮ್ಮ ಗ್ರಾಮಕ್ಕೆ ಪ್ರತಿನಿತ್ಯ ಬರುವ ಬಸ್ ಬಾರದೆ ಇದ್ದಿದ್ದನ್ನು ಕೇಳಿದ್ದಕ್ಕೆ ವಿದ್ಯಾರ್ಥಿ ಹಾಗೂ ಸಾರಿಗೆ ಸಂಸ್ಥೆಯ ನೌಕರರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ನಗರದ ಕೇಂದ್ರ ಬಸ್‌ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಢಣಾಪುರ ಗ್ರಾಮದ ಯುವಕ ಹನುಮೇಶ ಎಂಬುವವರ ಮೇಲೆ ಸಾರಿಗೆ ನೌಕರರು ಹಲ್ಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಢಣಾಪುರ ಗ್ರಾಮದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ನಗರದ ನಾನಾ ಕಾಲೇಜುಗಳಿಗೆ ಆಗಮಿಸುತ್ತಾರೆ. ಮಧ್ಯಾಹ್ನ ಗ್ರಾಮಕ್ಕೆ ಎರಡು ವಾಹನಗಳನ್ನು ಬಿಡಬೇಕಿತ್ತು. ಆದರೆ ಒಂದೇ ವಾಹನ ಬಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಈ ಬಗ್ಗೆ ವಿಚಾರಣೆಯ ಕೌಂಟರ್ ನಲ್ಲಿ ತಗಾದೆ ತೆಗೆದಿದ್ದಾರೆ. ಆದರೆ ಅಲ್ಲಿನ ನಿಯಂತ್ರಣಾಧಿಕಾರಿಗಳು ಡಿಪೋಗೆ ಹೋಗಿ ಕೇಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.
ಇದಕ್ಕೆ ಸಮ್ಮತಿ ಸೂಚಿಸಿದ ಕೆಲ ವಿದ್ಯಾರ್ಥಿಗಳು, ಘಟಕಕ್ಕೆ ತೆರಳಿ ವಾಹನ ಬರುವರೆಗೂ ಇನ್ನೊಂದು ವಾಹನ ಚಲಿಸದಂತೆ ಒತ್ತಡ ಹೇರಿದ್ದರಿಂದ ಪರಸ್ಪರಮಾತಿನ ಚಕಮಕಿ ನಡೆದು ಘರ್ಷಣೆ ಸಂಭವಿಸಿದೆ ಎನ್ನಲಾಗಿದೆ.