ಗಂಗಾವತಿ(ಕೊಪ್ಪಳ) : ಶ್ರೀರಾಮನ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೊಪ್ಪಳ ಜಿಲ್ಲೆಯ ಏಕೈಕ ಕಲಾವಿದ ಅದೂ ಗಂಗಾವತಿ ಯುವಕನಿಗೆ ಅವಕಾಶ ಸಿಕ್ಕಿದೆ. ಇಲ್ಲಿನ ಲಕ್ಷ್ಮಿಕ್ಯಾಂಪಿನ ವೃತ್ತಿಪರ ಶಿಲ್ಪ ಕಲಾವಿದ ಪ್ರಶಾಂತ ಸೋನಾರ ಎಂಬ ಯುವಕನಿಗೆ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾಮಗಾರಿಯಲ್ಲಿ ಅದರಲ್ಲೂ ಮುಖ್ಯವಾಗಿ ಮಂದಿರದ ಪ್ರಧಾನ ಭಾಗ ಗರ್ಭಗುಡಿ ಪ್ರಾಂಗಣದಲ್ಲಿ ಶಿಲ್ಪಕಲೆ ಕೆತ್ತನೆಗೆ ಅವಕಾಶ ಸಿಕ್ಕಿದೆ.

ಉತ್ತರ ಭಾರತದ ರಾಮನ ಅಯೋಧ್ಯೆಗೂ ದಕ್ಷಿಣ ಭಾರತದ ಹನುಮನ ಕಿಷ್ಕಿಂಧೆಗೂ ಅವಿನಾಭಾವ ಸಂಬಂಧ. ರಾಮಾಯಣದಂತ ಮಹಾಕಾವ್ಯದಲ್ಲಿನ ಉಲ್ಲೇಖ ಸೇರಿದಂತೆ ಸಾವಿರಾರು ವರ್ಷಗಳಿಂದ ಬೆಸೆದಿರುವ ಈ ಸಂಬಂಧಕ್ಕೆ ಮತ್ತೊಂದು ಬೆಸುಗೆ ಮೂಡಿದೆ.
ಇಡೀ ವಿಶ್ವವೇ ಭಾರತದತ್ತ ಅದರಲ್ಲೂ ಅಯೋಧ್ಯೆಯತ್ತ ತಿರುಗಿ ನೋಡುವಂತೆ ಪ್ರಭು ಶ್ರೀರಾಮನ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೊಪ್ಪಳ ಜಿಲ್ಲೆಯ ಏಕೈಕ ಕಲಾವಿದ ಅದೂ ಗಂಗಾವತಿ ಯುವಕನಿಗೆ ಅವಕಾಶ ಸಿಕ್ಕಿದೆ.

ಗರ್ಭಗುಡಿ ಪ್ರಾಂಗಣದ ಹೊರ ಆವರಣದಲ್ಲಿರುವ ಶಿಲಾ ಸ್ತಂಬಗಳ ಮೇಲೆ ಬಳ್ಳಿಗಳ ಕುಸರಿ ಕೆತ್ತನೆಯ ಕೆಲಸ ಪ್ರಶಾಂತ ಮತ್ತು ಆತನ ಸ್ನೇಹಿತರಿಗೆ ಸಿಕ್ಕಿದೆ. ಕಳೆದ ಆರು ತಿಂಗಳಿಂದ ಅಯೋಧ್ಯೆಯಲ್ಲಿಯೇ ಬೀಡುಬಿಟ್ಟಿರುವ ಈ ಯುವಕ, ತನಗೊಪ್ಪಿಸಿದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ.
ಇಡೀ ಪ್ರಪಂಚವೇ ಅಯೋಧ್ಯೆಯ ರಾಮಮಂದಿರದತ್ತ ನೋಡುತ್ತಿದೆ. ಇಂತಹ ದೇಗುಲದಲ್ಲಿ ಅದೂ ಶ್ರೀರಾಮಚಂದ್ರನ ಸನ್ನಿಧಾನದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಪ್ರಶಾಂತ ಸೋನಾರ ಹೇಳಿದ್ದಾರೆ.
'ದೇಗುಲ ಉದ್ಘಾಟನೆಯಾಗಿ ಸಾರ್ವಜನಿಕರಿಗೆ ಮುಕ್ತವಾಗುವವರೆಗೂ ಕಾಮಗಾರಿ ಸಂದರ್ಭದಲ್ಲಿ ಫೊಟೋ ಅಥವಾ ವಿಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಅತ್ಯಂತ ಬಿಗುವಾದ ಮುಂಜಾಗ್ರತಾ ಕ್ರಮಗಳ ನಡುವೆ ಕೆಲಸ ಮಾಡಬೇಕಿದೆ' ಎಂದು ಪ್ರಶಾಂತ ಸೋನಾರ ಹೇಳುತ್ತಾರೆ.
'ಅಯೋಧ್ಯೆಯ ರಾಮಮಂದಿರ ನಿರ್ಮಾಣದಲ್ಲಿ ಕೊಪ್ಪಳದಿಂದ ಒಬ್ಬ ಶಿಲ್ಪ ಕಲಾವಿದ, ರಾಯಚೂರಿನ, ಗದಗಿನ ಇಬ್ಬರು, ಧಾರವಾಡದ ಸೂಪರ್ ವೈಸರ್ ಒಬ್ಬರು ನಿಯೋಜನೆಯಾಗಿದ್ದಾರೆ. ಸೋನಾರ್ ಕೊಪ್ಪಳ ಜಿಲ್ಲೆಯ ಹೆಮ್ಮೆಯ ಶಿಲ್ಪ ಕಲಾವಿದ' ಎಂದು ಕನ್ನಡ ಉಪನ್ಯಾಸಕ ಪವನಕುಮಾರ ಗುಂಡೂರು ಹರ್ಷ ವ್ಯಕ್ತಪಡಿಸಿದ್ದಾರೆ.
ಗಂಗಾವತಿ ತಾಲೂಕಿನ ಮಲ್ಲಾಪುರ ರಸ್ತೆಯಲ್ಲಿರುವ ಪ್ರತ್ಯಂಗೀರಾ ದೇವಿ ವಿಗ್ರಹ, ಚಳ್ಳೂರಿನ ವಾಲ್ಮಿಕಿ, ಕನಕಗಿರಿಯ ಕನಕಾಚಲ ದೇಗುಲದಲ್ಲಿ ಅಂಬೆಗಾಲಿನ ಕೃಷ್ಣನ ಶಿಲ್ಪ ವಿಗ್ರಹ, ಗರುಡ, ಬಸರಿಹಾಳದಲ್ಲಿ ವಾಲ್ಮಿಕಿ ಮೂರ್ತಿಯನ್ನು ಪ್ರಶಾಂತ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯದ ವಿಡಿಯೋ ಬಿಡುಗಡೆ.. ಜನವರಿಯಲ್ಲಿ ಪ್ರಾಣ ಪ್ರತಿಷ್ಠಾಪನೆ, ಪ್ರಧಾನಿ ಮೋದಿಗೆ ಆಹ್ವಾನ