ಕೊಪ್ಪಳ: ಕೃಷಿ ಚಟುವಟಿಕೆಗಳಿಗೆ ಈಗ ಕೂಲಿ ಕೆಲಸಗಾರರ ಕೊರತೆ ಹೆಚ್ಚಾಗುತ್ತಲೆ ಇದೆ. ಹೀಗಾಗಿ ಕೆಲಸಗಾರರ ಅವಲಂಬನೆಯನ್ನು ಕಡಿಮೆ ಮಾಡಲು ಕೃಷಿ ಕ್ಷೇತ್ರದಲ್ಲಿಯೂ ಹೊಸ ಆವಿಷ್ಕಾರಗಳಾಗುತ್ತಿವೆ. ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿಯೂ ರೈತರು ನೂತನ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿ ಎಂಬಂತೆ ಕೊಪ್ಪಳ ಜಿಲ್ಲೆಯಲ್ಲಿ ರೈತರೊಬ್ಬರು ಡ್ರೋನ್ ಬಳಸಿ ಭತ್ತದ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿ ಗಮನ ಸೆಳೆದಿದ್ದಾರೆ.
ಜಿಲ್ಲೆಯ ಭತ್ತದ ಕಣಜ ಎಂಬ ಖ್ಯಾತಿ ಪಡೆದಿರುವ ಗಂಗಾವತಿ ಭಾಗದಲ್ಲಿ ಬೆಳೆಯುವ ಉತ್ಕೃಷ್ಟ ಗುಣಮಟ್ಟದ ಭತ್ತ ಪ್ರಸಿದ್ಧಿ ಪಡೆದುಕೊಂಡಿದೆ. ಭತ್ತ ಬೆಳೆಯುವ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಈಗ ಕೃಷಿ ಕೂಲಿಕಾರ್ಮಿಕರ ಕೊರತೆ ಕಾಣುತ್ತಿದೆ. ಕೃಷಿ ಕೂಲಿಕಾರರ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದೊಂದಿಗೆ ಜಿಲ್ಲೆಯಲ್ಲಿ ಒಂದಿಷ್ಟು ರೈತರು ತಂತ್ರಜ್ಞಾನ, ಉಪಕರಣಗಳ ಮೊರೆ ಹೋಗ್ತಿದ್ದಾರೆ. ಅದರಂತೆ ಗಂಗಾವತಿ ಭಾಗದಲ್ಲಿ ಭತ್ತದ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಡ್ರೋನ್ ಬಳಸಲಾಗುತ್ತಿದೆ.
ತಮಿಳುನಾಡಿನಿಂದ ಡ್ರೋನ್ ತರಿಸಿಕೊಂಡು ಭತ್ತದ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದಾರೆ. ಎಕರೆಗೆ 500 ರಿಂದ 600 ರೂಪಾಯಿ ಹಣ ನೀಡಿ ಪ್ರಾಯೋಗಿಕವಾಗಿ ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಎಕರೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಸಮಯ ಬೇಕು. ಆದರೆ, ಡ್ರೋನ್ ಮೂಲಕ ಕೆಲವೇ ನಿಮಿಷಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಬಹುದು. ಇದರಿಂದ ಹಣ ಹಾಗೂ ಸಮಯದ ಉಳಿತಾಯವಾಗುತ್ತಿದೆ.
ತಮಿಳುನಾಡಿನಿಂದ ಗಂಗಾವತಿ ಭಾಗಕ್ಕೆ ತರಲಾಗಿರುವ ಈ ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಣೆಯ ಪ್ರಯತ್ನ ಯಶಸ್ವಿಯಾಗಿದೆ. ಸುಮಾರು 8 ಲಕ್ಷ ರೂಪಾಯಿಯ ಈ ಡ್ರೋನ್ ಗೆ 11 ಲೀಟರ್ ಸಾಮರ್ಥ್ಯದ ಕ್ಯಾನ್ ಅಳವಡಿಸಲಾಗಿದೆ. ಇದರ ಜತೆಗೆ ಜಿಪಿಎಸ್ ಸಹ ಅಳವಡಿಸಲಾಗಿದ್ದು, ಎಷ್ಟು ಎಕರೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ ಎಂಬುದನ್ನು ತಿಳಿಯಬಹುದಾಗಿದೆ.