ಕೊಪ್ಪಳ : ನಾಗರ ಪಂಚಮಿ ಹಬ್ಬವನ್ನು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಗ್ರಾಮೀಣ ಭಾಗದಲ್ಲಂತೂ ವಿಶೇಷ ಕ್ರೀಡೆಗಳು ಅಂದು ಗರಿಗೆದರುತ್ತವೆ. ಮನೆಯಲ್ಲಿ ಅವ್ವ ಮಾಡಿದ ಉಂಡಿ(ಲಡ್ಡು)ಯನ್ನು ತಿಂದು ಊರ ಮುಂದೆ ಸೇರುವ ಯುವಪಡೆ ಹಲವಾರು ಆಟಗಳನ್ನು ಆಡುತ್ತಾರೆ.
ಗ್ರಾಮೀಣ ಸೊಗಡಿನ ಹಬ್ಬ ನಾಗರ ಪಂಚಮಿಯನ್ನು ಹೆಂಗಳೆಯರು ವಿಶೇಷವಾಗಿ ಆಚರಿಸುತ್ತಾರೆ. ಕೈತುಂಬ ಬಳೆ, ಮುಡಿತುಂಬ ಹೂ ತೊಟ್ಟು ನಾಗಪ್ಪನಿಗೆ ಹಾಲೆರೆದು ಭಕ್ತಿ ಭಾವ ಮೆರೆಯುತ್ತಾರೆ. ಅಲ್ಲದೆ ಊರ ಮುಂದಿನ ದೊಡ್ಡ ಮರಕ್ಕೆ ಜೋಕಾಲಿ ಕಟ್ಟಿ ಉಯ್ಯಾಲೆ ಆಡಿ ಸಂಭ್ರಮಿಸುತ್ತಾರೆ.
ಇತ್ತ ಯುವ ಪಡೆ ರುಚಿ ರುಚಿ ಅಡುಗೆ ಸವಿದು ಮನೆಯಿಂದ ಹೊರ ಬಿದ್ರೆ ಸಾಕು, ಊರ ಮುಂದೆ ಲಿಂಬೆ ಹಣ್ಣು ಎಸೆಯುವ ಆಟಕ್ಕೆ ನಿಲ್ಲುತ್ತಾರೆ. ನಿಗದಿತ ಸ್ಥಳಕ್ಕೆ ನಿಂಬೆಹಣ್ಣು ಎಸೆಯುವ ಸಾಹಸ ಅಷ್ಟು ಸರಳವೇನು ಅಲ್ಲ ಬಿಡಿ.
ಅಲ್ಲದೆ, ನಿಂಗೆ ಹಣ್ಣನ್ನು ಸಣ್ಣ ತಗ್ಗಿಗೆ ಬೀಳಿಸಿದವರೆ ಅಂದಿನ ಅದ್ಭುತ ಕ್ರೀಡಾಪಟು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಗದಿತ ಸ್ಥಳ ತಲುಪುವುದು, ಶಬ್ದವೇದಿ ವಿದ್ಯಯಂತೆ ಭಾಸ ವಾಗುತ್ತದೆ. ಹೀಗೆ ಹಲವಾರು ಆಟಗಳನ್ನು ಆಡಿ ಮನೆ ಸೇರುವಷ್ಟರಲ್ಲಿ ಸೂರ್ಯ ಮಲಗಿರುತ್ತಾನೆ.
ಸಿಟಿಯಲ್ಲಿ ನಾಗರ ದೇಗುಲಕ್ಕೆ ತೆರಳಿ ಹಾಲೆರೆದು ಬಂದು ಒಂದಿಷ್ಟು ಸೆಲ್ಫಿ ಅಪ್ಲೋಡ್ ಮಾಡಿದ್ರೆ ಹಬ್ಬ ಮುಗಿದಂತೆ. ಆದ್ರೆ, ಗ್ರಾಮೀಣ ಪ್ರದೇಶದಲ್ಲಿ ಈ ಹಬ್ಬವನ್ನು ಬಹಳ ಅದ್ಭುತವಾಗಿ ಆಚರಿಸಲಾಗುತ್ತದೆ.