ಕುಷ್ಟಗಿ (ಕೊಪ್ಪಳ): ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ರಾಜ್ಯದ ಗಡಿಭಾಗಗಳನ್ನು ಮುಚ್ಚಿದ ಅಧಿಕಾರಿಗಳು ನೆರೆ ರಾಜ್ಯದ ಕೂಲಿ ಕಾರ್ಮಿಕರು ಉಳಿದುಕೊಳ್ಳಲು ಅಲ್ಲಲ್ಲಿ ವ್ಯವಸ್ಥೆ ಕಲ್ಪಿಸಿದ್ದರು. ಇದೀಗ ಈ ಕಾರ್ಮಿಕರಿಗೆಲ್ಲಾ ಬಿಗ್ ರಿಲೀಫ್ ದೊರೆತಿದೆ.
ಕುಷ್ಟಗಿಯ ವಸತಿ ನಿಲಯದಲ್ಲಿಉಳಿದುಕೊಂಡಿದ್ದ ಉತ್ತರ ಭಾರತದ ಮೂಲದ 108 ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ವಿಶೇಷ ಬಸ್ಗಳ ಮೂಲಕ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಮಹತ್ವದ ಆದೇಶದ ಮೇರೆಗೆ ಈ ಸೌಕರ್ಯ ಕಲ್ಪಿಸಲಾಗುತ್ತಿದೆ. ಈ ಸೂಚನೆ ಮೇರೆಗೆ ಇಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ತಹಶೀಲ್ದಾರ ಎಂ. ಸಿದ್ದೇಶ್ ವಿಶೇಷ ವಾಹನದ ವ್ಯವಸ್ಥೆ ಬಗ್ಗೆ ಚರ್ಚಿಸಿದರು. ತಹಶೀಲ್ದಾರ್ ಎಂ. ಸಿದ್ದೇಶ್ ಅವರು, ಜಿಲ್ಲಾಧಿಕಾರಿ ಅನುಮತಿ ನೀಡಿದ ಬಳಿಕ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ವಿಚಾರ ತಿಳಿಯುತ್ತಿದ್ದಂತೆ ಕಳೆದ ಒಂದು ತಿಂಗಳಿಂದ ತಮ್ಮ ರಾಜ್ಯಗಳಿಗೆ ಹೋಗಲಾಗದೆ ಕ್ಯಾದಿಗುಪ್ಪ ಎಂಬಲ್ಲಿ ಸಿಲುಕಿದ್ದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದ ಕಾರ್ಮಿಕರು ಬಹಳ ಸಂತೋಷ ವ್ಯಕ್ತಪಡಿಸಿದರು.