ಕೊಪ್ಪಳ: ಚೀನಾ ವಸ್ತುಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂಬ ಕೂಗು ದೇಶದ ಜನರಲ್ಲಿ ಕೇಳಿ ಬರುತ್ತಿದೆ. ಮಕ್ಕಳ ಆಟಿಕೆ ವಸ್ತುಗಳಲ್ಲಿಯೂ ನಾವು ಬಹುಪಾಲು ಚೀನಾವನ್ನೇ ಅವಲಂಬಿಸಿದ್ದೇವೆ. ಆದರೆ ಈಗ ಆಟಿಕೆ ವಸ್ತುಗಳ ತಯಾರಿಕೆ ಕ್ಲಸ್ಟರ್ ಕೊಪ್ಪಳ ಜಿಲ್ಲೆಯಲ್ಲಿ ಪ್ರಾರಂಭಕ್ಕೆ ಸಿದ್ಧತೆಗಳು ಬಲು ಜೋರಾಗಿ ನಡೆದಿವೆ.
ಹೌದು, 2018-19 ರ ಬಜೆಟ್ನಲ್ಲಿ ಅಂದಿನ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆ ವಸ್ತುಗಳ ತಯಾರಿಕಾ ಕ್ಲಸ್ಟರ್ ಸ್ಥಾಪನೆ ಮಾಡುವ ಘೋಷಣೆ ಮಾಡಿದ್ದರು. ಅದರಂತೆ ವಿಶೇಷ ಆರ್ಥಿಕ ವಲಯದಲ್ಲಿ (SEZ) ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಆಟಿಕೆ ವಸ್ತುಗಳ ತಯಾರಿಕಾ ಕ್ಲಸ್ಟರ್ ಸ್ಥಾಪನೆಗೆ ಬೇಕಾದ ಎಲ್ಲ ಸಿದ್ಧತೆಗಳು ನಡೆದಿವೆ.
ಮುಂದಿನ ಜೂನ್ ವೇಳೆಗೆ ಇಲ್ಲಿ ಆಟಿಕೆ ವಸ್ತುಗಳು ತಯಾರಾಗಲಿವೆ. ಜಿಲ್ಲೆಯ ನೂತನ ಕುಕನೂರು ತಾಲೂಕಿನ ಭಾಣಾಪುರ ಗ್ರಾಮದ ಸುತ್ತಮುತ್ತ ಏಕಸ್ (AQUES) ಸಂಸ್ಥೆಯು ಆಟಿಕೆ ವಸ್ತುಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸುತ್ತಿದೆ. ಈ ಆಟಿಕೆ ಕ್ಲಸ್ಟರ್ ಸ್ಥಾಪನೆಗೆ ಬೇಕಾದ 400 ಎಕರೆಯಷ್ಟು ಭೂಮಿಯನ್ನು ಈಗಾಗಲೇ ಸ್ವಾಧೀನ ಮಾಡಿಕೊಳ್ಳಲಾಗಿದೆ. ಅಲ್ಲದೆ ಪ್ರಾಥಮಿಕ ಹಂತದ ಕೆಲಸಗಳು ನಡೆದಿವೆ.
ಏಕಸ್ ಸಂಸ್ಥೆಯು ಐದು ವರ್ಷದ ಅವಧಿಯಲ್ಲಿ ಹಂತ ಹಂತವಾಗಿ ಸುಮಾರು 5 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಲಿದೆ. ಇದರಿಂದಾಗ ಹಂತ ಹಂತವಾಗಿ ಸುಮಾರು 25 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಟಿಕೆ ತಯಾರಿಕಾ ಕ್ಲಸ್ಟರ್ ಸ್ಥಾಪನೆಗೆ ಬೇಕಾದ ಭೂಮಿಯನ್ನು ಒದಗಿಸಲಾಗಿದೆ ಮತ್ತು ಜಿಲ್ಲಾಡಳಿತದಿಂದ ಎಲ್ಲ ಅನುಕೂಲ, ಅನುಮತಿಗಳನ್ನು ನೀಡಲಾಗಿದೆ. ಈಗ ರಾಜ್ಯ ಮಟ್ಟದಲ್ಲಿ ಫಾಲೋಅಪ್ ಮಾಡಲಾಗುತ್ತಿದೆ. ನಿರ್ಧರಿತ ಸಮಯದಲ್ಲಿ ಆಟಿಕೆ ಕ್ಲಸ್ಟರ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆ ವಸ್ತುಗಳ ತಯಾರಿಕಾ ಕ್ಲಸ್ಟರ್ ಸ್ಥಾಪನೆಯಿಂದಾಗಿ ಚೀನಾ ತಯಾರಿಕೆಯ ಆಟಿಕೆಯ ವಸ್ತುಗಳ ಮೇಲಿನ ಅವಲಂಬನೆ ತುಸು ಕಡಿಮೆಯಾಗಲಿದೆ. ಅಲ್ಲದೆ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲಿ ಆಟಿಕೆ ತಯಾರಿಕಾ ಕ್ಲಸ್ಟರ್ ಸ್ಥಾಪನೆಯಿಂದ ಈ ಭಾಗದ ಜನರಿಗೆ ಉದ್ಯೋಗ ಸಿಗಲಿದೆ ಎನ್ನುವ ಅಶಾಭಾವ ವ್ಯಕ್ತಪಡಿಸುತ್ತಾರೆ ಸ್ಥಳೀಯರು.
ಒಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆ ಕ್ಲಸ್ಟರ್ ಸ್ಥಾಪನೆಯಿಂದಾಗಿ ಈ ಭಾಗದಲ್ಲಿನ ಜನರಿಗೆ ಉದ್ಯೋಗ ಸಿಗುವ ವಿಶ್ವಾಸ ಮೂಡಿದೆ.