ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ಜುಂಜಲಕೊಪ್ಪ ಗ್ರಾಮದ ಹನಮಪ್ಪ ದಾಸರ್ ಅವರು ಅನಾರೋಗ್ಯ ಪೀಡಿತ ತನ್ನ ತಾಯಿಯನ್ನು ಸುಮಾರು ಮೂರು ಕಿ.ಮೀ. ದೂರದ ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀರು ತರುವ ತಳ್ಳುಗಾಡಿಯಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾರೆ.
ಹನಮಂತಪ್ಪ ದಾಸರ್ ಮೇಕೆ ಕಾಯುವ ಕಾಯಕ ಮಾಡಿಕೊಂಡಿದ್ದು, ಈಗಿನ ಪರಿಸ್ಥಿತಿಯಲ್ಲಿ ಈ ಕುಟುಂಬಕ್ಕೆ ಕೂಲಿಯೇ ಜೀವನಾಧರವಾಗಿದೆ. ಪಡಿತರ ಆಹಾರ ಧಾನ್ಯ, ವೃದ್ಧಾಪ್ಯ ವೇತನ ಕೊಂಚ ಜೀವನಕ್ಕೆ ಆಸರೆಯಾಗಿದೆ. ತಾಯಿ ಹನುಮವ್ವಳಿಗೆ ಆಗಾಗ್ಗೆ ಆರೋಗ್ಯ ಕೈಕೊಡುತ್ತಿರುವ ಹಿನ್ನೆಲೆ ಚಳಗೇರಾ ಆಸ್ಪತ್ರೆ ಹೋಗಲು ಈ ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲ. ಹೀಗಾಗಿ ಬಹುತೇಕರು ಮೂರು ಕಿ.ಮೀ. ಇರುವ ಚಳಗೇರಾ ಆಸ್ಪತ್ರೆಗೆ ಕಾಲ್ನಡಿಗೆಯನ್ನೆ ನೆಚ್ಚಿಕೊಂಡಿದ್ದಾರೆ.
ಗ್ರಾಮದಲ್ಲಿ ಪ್ರಯಾಣಿಕರನ್ನುಸಾಗಿಸುವ ಖಾಸಗಿ ವಾಹನಗಳು ಕೂಡ ಅಷ್ಟಾಗಿ ಲಭ್ಯವಿಲ್ಲ.ಇರುವವು ಕೂಡ ಕೃಷಿ ಉತ್ಪನ್ನ, ಸರಕು ಸಾಗಾಣಿಕೆಗೆ ಬಳಕೆಯಾಗುತ್ತಿವೆ. ಹನಮವ್ವಳಿಗೆ ಬೈಕ್ ಹತ್ತಲು ಬಾರದು, ಹೀಗಾಗಿ ಗ್ರಾಮದಲ್ಲಿ ಯಾರು ಬೈಕ್ಗೆ ಹತ್ತಿಸಿಕೊಳ್ಳುವುದಿಲ್ಲ. ಹೀಗಾಗಿ ಹನಮಪ್ಪ ದಾಸರ್ ತಮ್ಮ ತಾಯಿಯನ್ನು ನೀರು ತರುವ ತಳ್ಳುಗಾಡಿಯಲ್ಲಿ ಕೂರಿಸಿಕೊಂಡು 3 ಕಿ.ಮೀ. ತಳ್ಳಿಕೊಂಡು ಕರೆದೊಯ್ಯುವುದು ಅನಿವಾರ್ಯವೆನಿಸಿದೆ. ಈಗಿನ ಪರಿಸ್ಥಿತಿಯಲ್ಲಿ ಈ ಕುಟುಂಬಕ್ಕೆ ನೀರಿನ ತಳ್ಳುಗಾಡಿ ಆ್ಯಂಬ್ಯುಲೆನ್ಸ್ ಆಗಿದ್ದು ಈ ದೃಶ್ಯ ನೋಡಿದರೆ ಕರುಳು ಹಿಂಡುವಂತಿದೆ.