ಗಂಗಾವತಿ(ಕೊಪ್ಪಳ): ಮದುವೆ, ಉಪನಯನ, ಗೃಹ ಪ್ರವೇಶದಂತ ಶುಭಕಾರ್ಯದ ಸಂದರ್ಭದಲ್ಲಿ ಹಲವರು ತಮಗಿಷ್ಟ ಬಂದಂತೆ ಕಾರ್ಯಕ್ರಮ ಆಯೋಜನೆ ಮಾಡಿ, ಭೂರಿ ಭೋಜನ ಹಾಕಿಸಿ ತಮ್ಮ ಆಪ್ತರು, ಬಂಧು ಬಳಗವನ್ನು ಸಂತೋಷ ಪಡಿಸುವುದುಂಟು. ಆದರೆ, ಇಲ್ಲೊಬ್ಬ ವ್ಯಕ್ತಿ ತಮ್ಮ ಮನೆ ಗೃಹ ಪ್ರವೇಶದ ಸಂದರ್ಭದಲ್ಲಿ ತನ್ನನ್ನು ಹೆತ್ತು-ಹೊತ್ತ ಸಮಾಜದಲ್ಲಿ ಒಳ್ಳೆಯ ಸ್ಥಾನಕ್ಕೆ ಬರಲು ಕಾರಣರಾದ ತಂದೆ-ತಾಯಿಗೆ ಸಕ್ಕರೆ ಮತ್ತು ಬೆಲ್ಲದ ತುಲಾಭಾರ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಮಾತೃದೇವೋ ಭವ, ಪಿತೃದೇವೋ ಭವ ಎಂದರೆ ತಾಯಿ–ತಂದೆಯರು ದೇವರಿಗೆ ಸಮಾನವಾಗಿದ್ದಾರೆ. ತಂದೆ-ತಾಯಿ ಮತ್ತು ಗುರುಗಳ ಸೇವೆ ಮಾಡುವುದೆಂದರೆ ಎಲ್ಲಕ್ಕಿಂತ ಉತ್ತಮ ತಪಶ್ಚರ್ಯವೇ ಆಗಿದೆ ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ತಂದೆ-ತಾಯಿಯರ ಮಹತ್ವವನ್ನು ಶಬ್ಧಗಳಲ್ಲಿ ಹೇಳುವುದು ತುಂಬ ಕಠಿಣ. ನಮಗೆ ಅಜ್ಜ–ಅಜ್ಜಿ, ಚಿಕ್ಕಪ್ಪ–ಚಿಕ್ಕಮ್ಮ, ಮಾವ–ಅತ್ತೆ ಇಂತಹ ಅಸಂಖ್ಯಾತ ಸಂಬಂಧಿಕರು ಇರುತ್ತಾರೆ. ಆದರೆ ನಮಗೆ ತಾಯಿ-ತಂದೆಯ ಸಂಬಂಧಕ್ಕಿಂತ ಮಿಗಿಲಾದ ಸಂಬಂಧ ಬೇರೊಂದಿಲ್ಲ. ಹಾಗಾಗೀ ತಾಯಿ-ತಂದೆಗೆ ತುಂಬಾ ಮಹತ್ವದ ಸ್ಥಾನವನ್ನು ನೀಡಲಾಗುತ್ತದೆ.
ವಾಸ್ತವದಲ್ಲಿ ತಂದೆ-ತಾಯಿಂದಿರ ಋಣ ತೀರಿಸಲಾಗದು ಎಂದು ಹಿರಿಯರು ಹೇಳುತ್ತಾರೆ. ಹೀಗಾಗಿ ತನ್ನಿಂದ ಸಾಧ್ಯವಾದದ್ದನ್ನು ಮಾಡುವ ಉದ್ದೇಶಕ್ಕೆ ತನ್ನ ತಂದೆ ಮತ್ತು ತಾಯಿಗೆ ತುಲಾಭಾರ ಮಾಡಿದ್ದಾರೆ. ತುಲಾಭಾರಕ್ಕೆ ಬಳಸಲಾದ ಸಕ್ಕರೆ-ಬೆಲ್ಲವನ್ನು ನೆಂಟರಿಗೆ, ಆತ್ಮೀಯರಿಗೆ ಹಾಗೂ ಮಠ ಮಾನ್ಯಗಳಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಹೆತ್ತು ಹೊತ್ತ ಅಪ್ಪ-ಅಮ್ಮನಿಗಿಂತ ಯಾವ ದೇವರು ದೊಡ್ಡವರಲ್ಲ:ತಾಲ್ಲೂಕಿನ ವಡ್ಡಹಟ್ಟಿ ಗ್ರಾಮದ ರೆಡ್ಡಿ ಲಿಂಗಾಂತ ಸಮಾಜದ ಯುವ ಮುಖಂಡ ಹಾಗೂ ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಯರ್ರಿಸ್ವಾಮಿ ಗೌಡ ಎಂಬ ಯುವಕ, ವಡ್ಡರಹಟ್ಟಿ ಗ್ರಾಮದಲ್ಲಿ ಮನೆ ಕಟ್ಟಿದ್ದಾರೆ. ಮನೆಯ ಗೃಹ ಪ್ರವೇಶದ ಸಂದರ್ಭದಲ್ಲಿ ಅವರ ಹಿತೈಷಿಗಳು ಯಾವುದಾದರೂ ಮಠದ ಸ್ವಾಮೀಜಿಗಳಿಗೆ ತುಲಾಭಾರ ಮಾಡುವಂತೆ ಸಲಹೆ ನೀಡಿದ್ದಾರೆ. ಆದರೆ ಹೆತ್ತು ಹೊತ್ತ ಅಪ್ಪ-ಅಮ್ಮನಿಗಿಂತ ಯಾವ ದೇವರು ದೊಡ್ಡವರಲ್ಲ ಎಂಬ ಉದ್ದೇಶದಿಂದ ಯರ್ರಿಸ್ವಾಮಿ ಗೌಡ, ತನ್ನ ತಂದೆ ತಾಯಿಗೆ ತುಲಾಭಾರ ಮಾಡಿದ್ದಾರೆ.
ಸಕ್ಕರೆ-ಬೆಲ್ಲಾ ಸೇರಿದಂತೆ ಇನ್ನಿತರ ಸಿಹಿ ಪದಾರ್ಥಗಳಿಂದ ತುಲಾಭಾರ:ತಾಯಿ ಈರಮ್ಮ ಹಾಗೂ ತಂದೆ ಕೃಷಿಕರಾಗಿರುವ ನೀಲಕಂಠಗೌಡ ಅವರನ್ನು ಯರ್ರಿಸ್ವಾಮಿ ಗೌಡ ತಮ್ಮ ನೂತನ ಮನೆಯ ಪ್ರವೇಶ ದ್ವಾರದಲ್ಲಿ ಕೂರಿಸಿ ಸಕ್ಕರೆ-ಬೆಲ್ಲಾ ಸೇರಿದಂತೆ ಇನ್ನಿತರ ಸಿಹಿ ಪದಾರ್ಥಗಳಿಂದ ತುಲಾಭಾರ ಮಾಡಲಾಗಿದೆ.
ಯುವ ಸಮುದಾಯ ತಂದೆ-ತಾಯಿಯನ್ನು ಕಡೆಗಾಣಿಸುವುದು ಸಮಾಜದಲ್ಲಿ ಹೆಚ್ಚಾಗಿದೆ: ಈ ಬಗ್ಗೆ ಮಾತನಾಡಿದ ಯರ್ರಿಸ್ವಾಮಿ ಗೌಡ, ಇಂದು ಯುವ ಸಮುದಾಯ ತಂದೆ-ತಾಯಿಯನ್ನು ಕಡೆಗಾಣಿಸುವುದು ಸಮಾಜದಲ್ಲಿ ಹೆಚ್ಚಾಗಿದೆ. ನಾವು ಭೂಮಿಗೆ ಬರಲು ಅವರು ಕಾರಣ. ಈ ಸ್ಥಾನಕ್ಕೆ ತಂದು ನಿಲ್ಲಿಸಲು ಮತ್ತು ಮಕ್ಕಳ ಪ್ರತಿಯೊಂದು ಬೆಳವಣಿಗೆಯಲ್ಲಿ ಪಾಲಕರ ಪಾತ್ರ ದೊಡ್ಡದು. ಹೀಗಾಗಿ ಅಪ್ಪ-ಅಮ್ಮಂದಿರನ್ನು ಮಕ್ಕಳು ಎಂದಿಗೂ ಮರೆಯಬಾರದು. ಅವರು ದೇವರಿಗಿಂತಲೂ ದೊಡ್ಡವರು ಎಂಬ ಕಾರಣಕ್ಕೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ಸಾರುವ ಉದ್ದೇಶಕ್ಕೆ ಅಪ್ಪ-ಅಮ್ಮನ ತುಲಾಭಾರ ಮಾಡಲಾಗಿದೆ ಎಂದು ಯರ್ರಿಸ್ವಾಮಿ ಗೌಡ ಎಂದು ಹೇಳಿದರು.
ಅಪ್ಪ-ಅಮ್ಮಂದಿರನ್ನು ಮಕ್ಕಳು ಎಂದಿಗೂ ಮರೆಯಬಾರದು. ಅವರು ದೇವರಿಗಿಂತಲೂ ದೊಡ್ಡವರು ಎಂಬ ಕಾರಣಕ್ಕೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ಸಾರುವ ಉದ್ದೇಶಕ್ಕೆ ಅಪ್ಪ-ಅಮ್ಮಂದಿರ ತುಲಾಭಾರ ಮಾಡಲಾಗಿದೆ ಎಂದು ಯರ್ರಿಸ್ವಾಮಿ ಗೌಡ ತಮ್ಮ ಮಾದರಿ ಕಾರ್ಯ ಕುರಿತು ವಿವರಿಸಿದರು.
ಇದನ್ನೂ ಓದಿ:ಅದ್ಭುತ ಜ್ಞಾಪಕ ಶಕ್ತಿ: ಬಡತನದಲ್ಲಿ ಅರಳುತ್ತಿರುವ ಪ್ರತಿಭೆಗೆ ಬೇಕಿದೆ ನೆರವು