ಕೊಪ್ಪಳ: ಇಟ್ಟಿಗೆ ಭಟ್ಟಿಯಲ್ಲಿ ಜೀತ ಕಾರ್ಮಿಕರಾಗಿ ದುಡಿಯುತ್ತಿದ್ದ ಕುಟುಂಬಗಳನ್ನು ಜಿಲ್ಲಾಡಳಿತ ಮುಕ್ತಿಗೊಳಿಸಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೊಪ್ಪಳ ತಹಶೀಲ್ದಾರರು ಹಾಗೂ ಕಾರ್ಮಿಕ ಇಲಾಖೆ, ಯುನಿಸೆಫ್ ಅಧಿಕಾರಿಗಳು ತಾಲೂಕಿನ ಗಿಣಗೇರಿ ಬಳಿ ಇರುವ ರಮೇಶ ಯಲ್ಲೂರ ಎಂಬುವವರಿಗೆ ಸೇರಿದ ಇಟ್ಟಿಗೆ ಭಟ್ಟಿಯನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಒರಿಸ್ಸಾ ಮೂಲದ ಕಾರ್ಮಿಕರನ್ನು ಜೀತದಾಳು ಪದ್ಧತಿಯಲ್ಲಿ ದುಡಿಸಿಕೊಳ್ಳುತ್ತಿರೋದು ಬೆಳಕಿಗೆ ಬಂದಿದೆ. ಒರಿಸ್ಸಾ ಮೂಲದ 58 ಜನರ ಪೈಕಿ 45 ಜನರು ಜೀತದಾಳುಗಳಾಗಿ ಇಟ್ಟಿಗೆ ಭಟ್ಟಿಯಲ್ಲಿ ದುಡಿಯುತ್ತಿದ್ದರು. ಇವರೊಂದಿಗೆ 10 ವರ್ಷದೊಳಗಿನ 13 ಮಕ್ಕಳು ಸಹ ವಾಸವಾಗಿದ್ದರು. ಈ ಎಲ್ಲರನ್ನು ಜಿಲ್ಲಾಡಳಿತ ಜೀತದಿಂದ ಮುಕ್ತಗೊಳಿಸಿದೆ.
ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ, ಬಾಲ ನ್ಯಾಯ ಕಾಯ್ದೆ ಹಾಗೂ ಭಾರತ ದಂಡ ಸಂಹಿತೆ 370 ರನ್ವಯ ಇಟ್ಟಿಗೆ ಭಟ್ಟಿ ಮಾಲೀಕ ರಮೇಶ ಯಲ್ಲೂರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ತಿಳಿಸಿದ್ದಾರೆ.