ಕೊಪ್ಪಳ : ತಾಲೂಕಿನ ಬೆಟಗೇರಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಸಿಬ್ಬಂದಿ ಕೂರತೆಯಿಂದಾಗಿ ಚಿಕಿತ್ಸೆ ನೀಡದೆ ರೋಗಿಗಳನ್ನು ಸಾಗ ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬೆಟಗೇರಿ ಪಕ್ಕದ ಹನಕುಂಟಿ ಗ್ರಾಮದ ವೃದ್ಧೆ ಕರಿಯಮ್ಮ ಎಂಬುವರು ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹಾಗಾಗಿ, ಬೆಟಗೇರಿ ಆಸ್ಪತ್ರೆಗೆ ಕರೆತರಲಾಗಿತ್ತು.
ಈ ಸಂದರ್ಭ ಸಿಬ್ಬಂದಿ ಕೊರತೆ ಮತ್ತು ವೈದ್ಯರು ಇಲ್ಲದ ಕಾರಣ ಉಪಚರಿಸದೆ ಸಿಬ್ಬಂದಿ ಬೇರೆ ಆಸ್ಪತ್ರೆಗೆ ಹೋಗಿ ಎಂದು ಸಾಗ ಹಾಕಿದರು. ಈ ವೇಳೆ ಗ್ರಾಮದ ಯುವಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ವೃದ್ಧೆಗೆ ಚಿಕಿತ್ಸೆ ಕೊಡಿಸಿದರು.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸುಮಾರು ಹತ್ತು ಗ್ರಾಮಗಳ ನಡುವೆ ಇರುವ ಆಸ್ಪತ್ರೆಯಾಗಿದೆ. ಇಲ್ಲಿ ಸಿಬ್ಬಂದಿ ಕೊರತೆ ನೆಪ ಹೇಳಿ ಹೆರಿಗೆ ಮಾಡಲು ಹಿಂದೇಟು ಹಾಕುತ್ತಾರೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಪರದಾಡುವಂತಾಗಿದೆ. ಕೂಡಲೇ ವೈದ್ಯರು ಹಾಗೂ ಪೂರ್ಣ ಸಿಬ್ಬಂದಿಯನ್ನು ನೇಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.