ಕೊಪ್ಪಳ: ಸಿದ್ದರಾಮಯ್ಯ ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿಯಾಗಿರೋದು ಸಂತೋಷ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ತಾಲೂಕಿನ ಮುನಿರಾಬಾದ್ನಲ್ಲಿ ಮಾತನಾಡಿದ ಅವರು, ನಾನು ಡಿಸಿಎಂ ಆಗಬೇಕು ಎಂದು ಸಿದ್ದರಾಮಯ್ಯ ಅವರು ಬಯಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಅದನ್ನು ಪೂರೈಸುತ್ತದೆ ಎಂದು ನಾನು ಭಾವಿಸಿದ್ದೇನೆ. ನಾನು ಡಿಸಿಎಂ ಆಗಬೇಕು ಎಂದು ಜನರು ಬಯಸಿದ್ದರು. ಅದನ್ನು ಸಿದ್ದರಾಮಯ್ಯ ಅವರು ಸಹ ಹೇಳಿದ್ದಾರೆ. ಅವರಿಗೆ ನನ್ನ ಮೇಲೆ ಪ್ರೀತಿ ಬಂದಿರೋದಕ್ಕೆ ಸಂತೋಷ. ಅವರ ಮೇಲೆ ನನಗೆ, ನನ್ನ ಮೇಲೆ ಅವರಿಗೆ ಪ್ರೀತಿ ಇದೆ. ಏಕೆಂದರೆ ನಾವೆಲ್ಲ ಕೆಳ ಸಮುದಾಯದಿಂದ ಬಂದವರು. ಹಾಗಾಗಿ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುತ್ತೇವೆ. ನಾನು ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತಗಳ ಮೇಲೆ ರಾಜಕಾರಣ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನನಗೆ ಅವಕಾಶ ಸಿಗುತ್ತದೆ ಎಂದರು.
ಉಪಚುನಾವಣೆ ಹಿನ್ನೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ಇಂದು ನಮ್ಮ ಅಭ್ಯರ್ಥಿ ಆನಂದ್ ಸಿಂಗ್ ಪರವಾಗಿ ಪ್ರಚಾರ ಮಾಡುತ್ತೇನೆ. ಎರಡು ದಿನಗಳ ಕಾಲ ಹುಣಸೂರಿನಲ್ಲಿ ಎಚ್. ವಿಶ್ವನಾಥ್ ಪರ ಪ್ರಚಾರ ಮಾಡುತ್ತೇನೆ. ಈ ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ತಾಲೂಕಿನ ಮುನಿರಾಬಾದ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಮುಂದಿನ ಮೂರುವರೆ ವರ್ಷ ಸುಭದ್ರ ಸರ್ಕಾರ ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಥಣಿ ಕ್ಷೇತ್ರದಲ್ಲಿ ನಾವು ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ನಾಮಪತ್ರ ಸಲ್ಲಿಸಿದ್ದ ಗುರು ದಾಶ್ಯಾಳ್ ನಾಮಪತ್ರ ವಾಪಾಸ್ ಪಡೆದಿದ್ದಾರೆ. ನಾಮಪತ್ರ ವಾಪಾಸ್ ಪಡೆಯುವಂತೆ ನಾನೇ ಅವರಿಗೆ ಮನವೊಲಿಸಿದ್ದೆ. ಅದರಂತೆ ನಮ್ಮ ಮಾತಿಗೆ ಬೆಲೆ ಕೊಟ್ಟು ಇಂದು ಅವರು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಅಥಣಿ ಕ್ಷೇತ್ರದಲ್ಲಿ ನಮ್ಮ ಗೆಲುವು ಖಚಿತ ಎಂದರು.