ಕೊಪ್ಪಳ: ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಮಂತ್ರಿಗಳು, ಸಂಸದರು ಸಣ್ಣಪುಟ್ಟ ಕೆಲಸಗಳಿಗೂ ಕೇಂದ್ರ ಸರ್ಕಾರದ ಮುಂದೆ ಕೈ ಕಟ್ಟಿ, ಮಂಡಿಯೂರಿ ಕುಳಿತುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿರುವುದು ರಣಹೇಡಿಗಳ ಸರ್ಕಾರ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಕುಷ್ಟಗಿ ಶಾಸಕ ಅಮರೇಗೌಡ ಬೈಯಾಪೂರ ಅವರ ಜನ್ಮ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಿರುದ್ಯೋಗ ತಾಂಡವ: ಸಮುದಾಯಗಳ ಮಧ್ಯೆ ಕೋಮುಗಲಭೆ ಎಬ್ಬಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದೀರಿ. ನಿಮ್ಮ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ, ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಗುಡುಗಿದರು. ನಮ್ಮ ಸರ್ಕಾರವಿದ್ದಾಗ ಜನಪರ ಯೋಜನೆಗಳಾದ ಅನ್ನ ಭಾಗ್ಯ ಯೋಜನೆಯಡಿ ಬಡಜನರಿಗೆ ಉಚಿತವಾಗಿ 7 ಕೆಜಿ ಅಕ್ಕಿ ನೀಡುತ್ತಿದ್ದೆವು. ಆದರೆ, ಬಿಜೆಪಿ ಸರ್ಕಾರ ಬಂದ ಮೇಲೆ 5 ಕೆಜಿಗೆ ಇಳಿಸಿದ್ದೀರಿ. ನಿಮ್ಮ ಅಪ್ಪನ ಮನೆಯಿಂದ ತಂದುಕೊಡುತ್ತೀರಾ? ಅದು ತೆರಿಗೆ ಹಣ, ತೆರಿಗೆ ಹಣ ಅಂದರೆ ಜನಸಾಮಾನ್ಯರ ಹಣ. ಅದನ್ನು ಖರ್ಚು ಮಾಡಿ ಎಂದು ಕಿಡಿಕಾರಿದರು.
ಅಭಿವೃದ್ಧಿ ಶೂನ್ಯ ಸರ್ಕಾರ: ಕೊಪ್ಪಳಕ್ಕೆ ಬಂದಿದ್ದ ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳುತ್ತಾರೆ, ತಮ್ಮದು ಲಂಚರಹಿತ ಸರ್ಕಾರ ಅಂತ. ಅಭಿವೃದ್ಧಿ ಪಟ್ಟಿ ಹಿಡಿದು ಹೋಗಿ ಅಂತಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಲೂಟಿ ಹೊಡೆಯುವುದು ಬಿಟ್ಟು ಬೇರೇನೂ ಮಾಡಿಲ್ಲ. ಏನೂ ಅಭಿವೃದ್ಧಿ ಮಾಡದೇ ಜನರ ಬಳಿ ಹೋಗಲು ನಾಚಿಕೆ ಆಗಲ್ವಾ? ಏನು ಹಿಡಿದು ಹೋಗಬೇಕು. ನಿಮ್ಮದು ಲಂಚದ ಸರ್ಕಾರ ಎಂದು ವಿಧಾನಸೌಧದ ಗೋಡೆ ಪಿಸುಗುಟ್ಟುತ್ತಿದೆ. ನಮ್ಮ ಅವಧಿಯಲ್ಲಿ 15 ಲಕ್ಷ ಮನೆ ನಿರ್ಮಾಣ ಮಾಡಿದ್ದೇವೆ. ನೀವು ಏನ್ ಮಾಡಿದ್ದೀರಿ ತೋರಿಸಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರ ಪ್ರಚಾರದ ಬಲೂನ್ಗೆ ಕೇಂದ್ರ ಬಿಜೆಪಿ ಸರ್ಕಾರವೇ ಸೂಜಿ ಚುಚ್ಚಿದೆ: ಸಿದ್ದರಾಮಯ್ಯ
ಕೊಪ್ಪಳ ಏತ ನೀರಾವರಿ ಸ್ಥಗಿತಗೊಂಡಿದೆ. ಈ ಹಿಂದೆ ನೀರಾವರಿ ಯೋಜನೆಗಳ ಬಗ್ಗೆ ಸರ್ವಪಕ್ಷ ನಿಯೋಗ ಕೊಂಡೊಯ್ದಿದ್ದೆ. ಅಂತಾರಾಜ್ಯ ವಿವಾದ ಇದ್ದಾಗ ಹಿಂದೆ ವಾಜಪೇಯಿ ಇತ್ಯರ್ಥ ಮಾಡಿದ್ದಾರೆ. ಆದರೆ, ನರೇಂದ್ರ ಮೋದಿ ಇಂತಹ ಯಾವ ಕೆಲಸವನ್ನು ಮಾಡಲಿಲ್ಲ.
ನಾವು ನುಡಿದಂತೆ ನಡೆದವರು: ಬೊಮ್ಮಾಯಿ, ಯಡಿಯೂರಪ್ಪ ನಡುವೆ ವೈಮನಸ್ಸು ಬಂದಿದೆ. ಸುಮ್ ಸುಮ್ನೆ ಬಿಎಸ್ವೈ ಕಿತ್ತಾಕಿದರು. ಬೊಮ್ಮಾಯಿ ಆರ್ಎಸ್ಎಸ್ ಕೂಸು. ನಿಲ್ಲು ಅಂದ್ರೆ ನಿಲ್ಲಬೇಕು. ಮೋದಿ ಹೆಡ್ ಮಾಸ್ಟರ್, ಶಾ ಅಸಿಸ್ಟೆಂಟ್ ಹೆಡ್ ಮಾಸ್ಟರ್. ಇವರೆಲ್ಲ ಕೈ ಕಟ್ಟಿ ನಿಲ್ತಾರೆ. ಅವರೆದುರು ಮಾತನಾಡುವ ಧೈರ್ಯ ಇಲ್ಲ. 15 ನೇ ಹಣಕಾಸಿನಲ್ಲಿ ಬಂದ ಸಾವಿರಾರು ಕೋಟಿ ರೂ. ಅನುದಾನ ಕೇಳಿ ಪಡೆಯಲಾಗಲಿಲ್ಲ.
ಕೋಮುವಾದಿ ಸರ್ಕಾರ ತೊಲಗಿಸಲು ಯಾತ್ರೆ: ಸಂಸದ ಸಂಗಣ್ಣ ಕರಡಿ ಒಂದು ದಿನವಾದರೂ ಸದನದಲ್ಲಿ ಬಾಯಿ ಬಿಟ್ಟರಾ? ಜನ ವಿರೋಧಿ, ಹಿಂದುಳಿದ, ಬಡವ, ದಲಿತರ ವಿರೋಧಿ ಸರ್ಕಾರ. ಇದನ್ನು ಕಿತ್ತೆಸೆಯದಿದ್ದರೆ ರಾಜ್ಯ ಅಭಿವೃದ್ಧಿಯಲ್ಲಿ ಹತ್ತು ವರ್ಷ ಹಿಂದೆ ಬೀಳುತ್ತದೆ. ಇವೆಲ್ಲವನ್ನ ತೊಲಗಿಸಲು ರಾಹುಲ್ ಗಾಂಧಿ ಈಗ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದಾರೆ.
ದೇಶದ ಯಾವೊಬ್ಬ ನಾಯಕ ಇಷ್ಟು ದೊಡ್ಡ ಪಾದಯಾತ್ರೆ ನಡೆಸಿದ ಇತಿಹಾಸವಿಲ್ಲ. ಕೋಮುವಾದಿ ಸರ್ಕಾರ ತೊಲಗಿಸಲು ಯಾತ್ರೆ ಮಾಡುತ್ತಿದ್ದಾರೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದು ಅವರಿಗೆ ಕೈ ಜೋಡಿಸಬೇಕು. ಬಯ್ಯಾಪುರ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದರು.